ಸಾಗರ: ಪ್ರಾಥಮಿಕ ಹಂತದಿAದಲೇ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕು. ಪ್ರತಿಭಾವಂತ ಮಕ್ಕಳಿಗೆ ಸೂಕ್ತ ಅವಕಾಶ ಸಿಕ್ಕರೆ ಅವರ ಭವಿಷ್ಯ ಉಜ್ವಲವಾಗುತ್ತದೆ. ಪ್ರತಿಭಾ ಕಾರಂಜಿ ಪ್ರತಿಭೆ ಅನಾವರಣದ ಪ್ರತೀಕ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್ ಮೆಳವರಿಗೆ ಹೇಳಿದರು.
ಸಾಗರ ತಾಲೂಕಿನ ಮಾಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಳವರಿಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ಕೆಳದಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳು ಪಠ್ಯದ ಜತೆಗೆ ಸಾಹಿತ್ಯ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಭಾರತೀಯ ಪರಂಪರೆಯನ್ನು ತಿಳಿಸಿ ಮೌಲ್ಯಯುತ ಶಿಕ್ಷಣ ಮಕ್ಕಳಿಗೆ ನೀಡಿದಾಗ ದೇಶದ ಸತ್ಪçಜೆಗಳಾಗುತ್ತಾರೆ. ಪ್ರತಿಭಾ ಕಾರಂಜಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಿನಿ ವಸಂತ್, ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಕಲಿಸುವ ಕೆಲಸವಾಗಬೇಕು. ಮಕ್ಕಳಿಗೆ ಪುಸ್ತಕದ ವಿಷಯ ಕಲಿಸುವ ಜತೆಗೆ ಸಂಸ್ಕೃತಿ, ಸಂಸ್ಕಾರ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡಬೇಕು ಎಂದು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿ.ಟಿ.ಸ್ವಾಮಿ, ಶರಾವತಿ ಸೋಮಶೇಖರ್, ಬೈರಾಗಿ ನಾರಾಯಣಪ್ಪ, ಮಾಲತೇಶಪ್ಪ, ಅಣ್ಣಪ್ಪ, ಗಣಪತಿ, ಪ್ರಮೋದ್ ಕುಮಾರ್, ಭಕ್ತೇಶ್, ಶ್ರೀಧರ್, ಲೋಕೇಶ್ ಇತರರಿದ್ದರು.