ಜಿಲ್ಲೆ

ಸಿಎ ಮುಗಿಸಿದವರ ಭವಿಷ್ಯ ಉಜ್ವಲ

ಮರಿದೇವ ಹೂಗಾರ

ಹುಬ್ಬಳ್ಳಿ: ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟಂಟ್ಸ್ ಆಫ್ ಇಂಡಿಯಾ ಹುಬ್ಬಳ್ಳಿ ಶಾಖೆ ವತಿಯಿಂದ ತಾಲೂಕಿನ ಹೆಬಸೂರು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಗುರುವಾರ ಸಿಎ ಕೋರ್ಸ್ ಬಗ್ಗೆ ತಿಳಿವಳಿಕೆ ಮೂಡಿಸುವ ಅಭಿಯಾನ ಏರ್ಪಡಿಸಲಾಗಿತ್ತು.
ಹಿರಿಯ ಲೆಕ್ಕಪರಿಶೋಧಕ ವಿ.ಸಿ. ಪರ್ವತಗೌಡರ್ ಮಾತನಾಡಿ, ಲೆಕ್ಕಪರಿಶೋಧನೆ ಮಾಡಿದವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳಿವೆ. ಇದರ ವಿಸ್ತಾರ ಸೀಮಿತಗೊಳಿಸಲಾಗುವುದಿಲ್ಲ. ಅಚ್ಚುಕಟ್ಟಾಗಿ ಅಧ್ಯಯನ ಮಾಡಿದರೆ, ಭವಿಷ್ಯ ಉಜ್ವಲವಾಗಲಿದೆ ಎಂದರು.
ಹಿರಿಯ ಲೆಕ್ಕಪರಿಶೋಧಕ ವೈ.ಎಂ. ಖಟಾವಕರ ಮಾತನಾಡಿ, ಭಾರತೀಯ ಲೆಕ್ಕಪರಿಶೋಧಕರು ವಿದೇಶದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇದರಿಂದ ಸೇವಾ ಕ್ಷೇತ್ರದಲ್ಲಿ ರಫ್ತು ಪ್ರಮಾಣ ಹೆಚ್ಚಿದೆ. ದೇಶ-ವಿದೇಶಿ ವಿನಿಮಯದಲ್ಲಿ ಏರಿಕೆಯಾಗಿದೆ ಎಂದರು.
ಹುಬ್ಬಳ್ಳಿ ಶಾಖೆ ಕಾರ್ಯದರ್ಶಿ ಧನಪಾಲ್ ಮುನ್ನೊಳ್ಳಿ ಅವರು ಕಳೆದ ಜು. 1ರಿಂದ ಜಾರಿಗೆ ಬಂದಿರುವ ಹೊಸ ಪಠ್ಯಕ್ರಮದ ರೂಪರೇಷೆ ಬಗೆಗೆ ವಿವರಿಸಿದರು.
ಪ್ರಾಚಾರ್ಯ ಎಸ್.ಕೆ. ಮುಲ್ಲಾನವರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಜೆಡ್.ಎಂ. ಘೋಡೆಸವಾರ, ವಿಜಯ ಗುಡಿ, ಎಂ.ವೈ. ಹುಬ್ಬಳ್ಳಿ ಇತರರು ಇದ್ದರು. 125 ವಿದ್ಯಾರ್ಥಿಗಳು ಭಾಗವಹಿಸಿದ್ದರು.