ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರನ್ನು ಗೌರವಿಸಿದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕ ವತಿಯಿಂದ ಸೋಮವಾರ ಏರ್ಪಡಿಸಿದ್ದ ಶಿಕ್ಷಣ ಪುನಶ್ಚೇತನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕ-ಶಿಕ್ಷಣ ಸಂಸ್ಕೃತಿಯ ಸಾಕಾರ ರೂಪವಾಗಿದ್ದು, ಇಂತಹ ಶಿಕ್ಷಕರನ್ನು ಗುರುತಿಸಿ ಗೌರವಿಸಬೇಕು. ಮಾನವ ಕುಲದ ಅಸ್ಮಿತೆಯ ಕೇಂದ್ರ ಶಾಲೆ. ಶಿಕ್ಷಕರು ಸಹನಶೀಲರು, ಸಾಧಕರು. ಧರ್ಮ ಗುರುಗಳು ಸಹ ಸಮಾಜ ಸುಧಾರಣೆಯ ಶಿಕ್ಷಕರು. ಪವಾಡ ನಂಬಿಕೆ, ಮೌಢ್ಯಗಳಿಂದ ಹೊರ ಬಂದು ಉತ್ತಮ ಸಮಾಜದ ನಿರ್ಮಾಣ ಮಾಡಬೇಕು ಎಂದರು.
ಅಖಿಲ ಭಾರತ ಶಿಕ್ಷಕರ ಫೆಡರೇಷನ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಶಿಕ್ಷಕರಿಗೆ ಕಾರ್ಯದ ಹೆಚ್ಚಿದ್ದು, ಇದರಿಂದ ಗುಣಾತ್ಮಕ ಶಿಕ್ಷಣ ನೀಡುವುದು ಕಷ್ಟಸಾಧ್ಯ. ಶಿಕ್ಷಣ ಪುನಶ್ಚೇತನ ಶಿಬಿರ ಶಿಕ್ಷಕರಿಗೆ ಅನುಕೂಲವಾಗಿದ್ದು, ಶಿಕ್ಷಣೇತರ ಕಾರ್ಯಗಳಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕು ಎಂದರು.
ಡಿಡಿಪಿಐ ಎಸ್.ಎಸ್. ಕೆಳದಿಮಠ ಮಾತನಾಡಿ, ಇದ್ದ ವ್ಯವಸ್ಥೆಯನ್ನು ಸರಿಮಾಡಿಕೊಂಡು ವಿದ್ಯಾರ್ಥಿಗಳಿಗೆ ಭೋಧನೆ ಮಾಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು ಎಂದರು.
ಜಿಲ್ಲಾಧ್ಯಕ್ಷ ವಿ.ಎಫ್. ಚುಳಕಿ ಅಧ್ಯಕ್ಷತೆ ವಹಿಸಿದ್ದರು. ಜಯಶ್ರೀ ಕಾರೇಕರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕಕುಮಾರ ಸಿಂದಗಿ, ರಾಮಕೃಷ್ಣ ಸದಲಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್ ಸಿದ್ಧನಗೌಡರ, ರಾಜ್ಯ ಉಪಾಧ್ಯಕ್ಷ ವೈ.ಎಚ್. ಬಣವಿ, ಕಾಂಚನಾ ರಾಯ್ಕರ, ಎಚ್.ಪಿ ನದಾಫ, ಜಗದೀಶ ವಿರಕ್ತಮಠ, ಶಾಂತಾ ಶೀಲವಂತ, ಎಂ.ಆರ್ ಕಬ್ಬೇರ, ಎ.ಆರ್ ದೇಸಾಯಿ, ಎನ್.ಎಸ್. ಕಮ್ಮಾರ, ಮಂಜುನಾಥ ಜಂಗಲಿ, ಯು.ಬಿ ಶಿರಹಟ್ಟಿ, ಎಂ.ಎಂ. ಘೋಡಕೆ, ಎಸ್.ಡಿ ಕೋರಿ, ಇತರರು ಇದ್ದರು.
ರಾಜಶೇಖರ ಹೊನ್ನಪ್ಪನವರ ಸ್ವಾಗತಿಸಿದರು. ಎಸ್.ಬಿ ಕೇಸರಿ ನಿರೂಪಿಸಿದರು.