ಬೆಂಗಳೂರು: ಲಾಕ್ಡೌನ್ ಸಂದರ್ಭದಲ್ಲಿ ಕಾರ್ವಿುಕರು, ಬಡವರು, ನಿರ್ಗತಿಕರಿಗೆ ಆಹಾರ ವ್ಯವಸ್ಥೆ ಮಾಡುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು. ಆದರೆ, ಬೆಟ್ಟದಂತಿದ್ದ ಸಮಸ್ಯೆ ಮಂಜಿನಂತೆ ಕರಗಿದೆ!
‘ಸೇವೆಗೆ ಸಾವಿರ ಸಾವಿರ ಕೈ’ ಎನ್ನುವುದನ್ನು ಸ್ವಯಂಸೇವಕರು, ಸಂಘ- ಸಂಸ್ಥೆಗಳು ಸಂಕಷ್ಟ ಸಂದರ್ಭದಲ್ಲಿ ಸಾಬೀತುಪಡಿಸಿದವು. ಲಾಕ್ಡೌನ್ ಸಂದರ್ಭದಿಂದಲೂ ಸೇವಾ ಕೈಂಕರ್ಯಕ್ಕೆ ತೊಡಗಿಸಿ ಕೊಂಡವರು ಇನ್ನೂ ಹಿಂತಿರುಗಿ ನೋಡಿಲ್ಲ. ಬೆಳಗ್ಗೆ, ರಾತ್ರಿ ಎನ್ನದೆ ಸೇವಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಸರ್ಕಾರವೇ ಸ್ವಯಂಸೇವಕರ ತಂಡಗಳನ್ನು ಮಾಡಿತ್ತು. ಆದರೆ, ಅದೆಲ್ಲವನ್ನೂ ಮೀರಿ, ಆಯಾ ಬಡವಾಣೆ, ಪ್ರದೇಶದಲ್ಲಿ ಅಲ್ಲಿನ ಸ್ವಯಂಸೇವಾ ಕಾರ್ಯಕರ್ತರು, ಸಂಘಟನೆಗಳು, ನಾನಾ ಸಮಾಜದ ಮುಖಂಡರು, ಹಸಿದವರಿಗೆ ಅನ್ನ ನೀಡಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಈ ಸೇವೆಯಿಂದ ರಾಜಕಾರಣಿಗಳೂ ಹೊರತಾಗಿಲ್ಲ. ನಿತ್ಯವೂ ತಮ್ಮ
ಕ್ಷೇತ್ರ ವ್ಯಾಪ್ತಿಯಲ್ಲಿ ಉಚಿತವಾಗಿ ಆಹಾರ ಪೊಟ್ಟಣ ಗಳನ್ನು ವಿತರಣೆ ಮಾಡಿ ಹಸಿವು ನೀಗಿಸುವ ಪ್ರಯತ್ನ ಮಾಡಿದ್ದಾರೆ. ಕಲ್ಯಾಣಮಂಟಪ ಸೇರಿದಂತೆ ಹತ್ತು ಹಲವು ಕಡೆಯಲ್ಲಿ ಅಡುಗೆ ಮಾಡಿ ಅಲ್ಲಿಂದ ಎಲ್ಲರಿಗೂ ಸರಬರಾಜು ಮಾಡುವ ಕೆಲಸವನ್ನು ಒಂದು ದಿನವೂ ಚಾಚು ತಪ್ಪದೆ ಮಾಡುತ್ತಿರುವುದು ವಿಶೇಷ.