ಜಿಲ್ಲೆ

ಸಂಯುಕ್ತ ಹೋರಾಟಕ್ಕೆ ಸಿಕ್ಕ ಫಲ

ಭೂಸ್ವಾಧೀನ ಕೈಬಿಟ್ಟ ನಿರ್ಧಾರ ಸ್ವಾಗತಿಸಿ ವಿಜಯೋತ್ಸವ

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ದೇವನಹಳ್ಳಿ ಬಳಿ ರೈತರ ಜಮೀನನ್ನು ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಕೈಬಿಟ್ಟ ಹಿನ್ನೆಲೆಯಲ್ಲಿ ತಾಲೂಕಿನ ರೈತರು ಶುಕ್ರವಾರ ನಗರದಲ್ಲಿ ವಿಜಯೋತ್ಸವ ಆಚರಿಸಿದರು.

ವಿಜಯೋತ್ಸವ ಉದ್ದೇಶಿಸಿ, ರಾಜ್ಯ ಜನಶಕ್ತಿ ಮತ್ತು ಭೂಮಿ, ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಉಪಾಧ್ಯಕ್ಷ ಸಿರಿಮನೆ ನಾಗರಾಜ್ ಮಾತನಾಡಿ, ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಭೂಮಿಯ ಬಲವಂತದ ಭೂಸ್ವಾಧೀನವನ್ನು ವಿರೋಧಿಸಿ 1198 ದಿನಗಳವರೆಗೆ ನಡೆಸಿದ ಸಂಯುಕ್ತ ಹೋರಾಟಕ್ಕೆ ಜಯ ದೊರೆತಿದೆ. ಈ ಹೋರಾಟದಲ್ಲಿ ರಾಜ್ಯ ಸೇರಿ ತಾಲೂಕಿನ ದಲಿತ ಸಂಘರ್ಷ ಸಮಿತಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಎದ್ದೇಳು ಕರ್ನಾಟಕ, ಜೀತವಿಮುಕ್ತ ಕರ್ನಾಟಕ, ರೈತ ಸಂಘಟನೆ, ಕಾರ್ಮಿಕ ಸಂಘಟನೆಗಳು ಭಾಗವಹಿಸಿ ಹೋರಾಟದ ಯಶಸ್ಸಿಗೆ ಕಾರಣರಾಗಿವೆ. ಈ ನಿಟ್ಟಿನಲ್ಲಿ ಬೆಂಬಲ ಸೂಚಿಸಿದ ರಾಜ್ಯದ ಎಲ್ಲ ತಾಲೂಕುಗಳಿಗೆ ತೆರಳಿ ವಿಜಯೋತ್ಸವ ಆಚರಿಸುವುದರ ಜತೆಗೆ ರೈತರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ರಾಜ್ಯ ಸಮಿತಿ ಸದಸ್ಯ ಮರಿಯಪ್ಪ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಭಿಪ್ರಾಯಕ್ಕೆ ಒಂದಲ್ಲ ಒಂದು ದಿನ ಜಯ ಸಿಕ್ಕೇ ಸಿಗುತ್ತದೆ ಎಂಬುದನ್ನು ಈ ಒಗ್ಗಟ್ಟಿನ ಹೋರಾಟ ನಿರೂಪಿಸಿದೆ. ಮುಂದೆ ಕೂಡ ಸರ್ಕಾರಗಳು ಯಾವುದೇ ಕಾರಣಕ್ಕೂ ರೈತರ ಜಮೀನುಗಳನ್ನು ಬಲವಂತದ ಸ್ವಾಧೀನ ಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕಬಾರದು ಎಂದರು.

ರಾಜ್ಯ ಸಮಿತಿ ಖಜಂಚಿ ಶ್ರೀರಂಗಾಚಾರಿ, ಮುಖಂಡರಾದ ಮುರುಗೇಶ್, ವಕೀಲ ಎಂ.ಆರ್.ಲಕ್ಷ್ಮೀ ನಾರಾಯಣ್, ಇಡಗೂರು ಸೋಮಯ್ಯ, ಪಿ.ನರಸಿಂಹಮೂರ್ತಿ, ರೈತ ಸಂಘದ ತಾಲೂಕು ಅಧ್ಯಕ್ಷ ಗುಂಡಾಪುರ ಲೋಕೇಶ್ ಗೌಡ ಮಾತನಾಡಿದರು.

ಮುಖಂಡರಾದ ಆದಿನಾರಯಣಪ್ಪ, ಸಿದ್ದಗಂಗಪ್ಪ, ನಂಜಪ್ಪ, ಗೋಪಾಲ್ ಗೌಡ, ವಿನಯ್, ಲಕ್ಷ್ಮೀನಾರಾಯಣ್, ಅಂಜಿನಪ್ಪ ಹಾಗೂ ರಾಜ್ಯದ ವಿವಿಧ ತಾಲೂಕಿನ ರೈತ ಮುಖಂಡರು

ಭಾಗವಹಿಸಿದ್ದರು.