ಮೈಸೂರು: ಕಬ್ಬಿಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ದರವೇ ಕಡಿಮೆ ಇದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸ್ಪಂದಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದ್ದು, ರೈತರ ಮನವೊಲಿಸುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಕೆಂದ್ರ ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ದರ ಕಡಿಮೆ ಇದೆ. ಎಫ್‌ಆರ್‌ಪಿ ದರಕ್ಕಿಂತಲೂ ಹೆಚ್ಚಿನ ದರವನ್ನು ಸಕ್ಕರೆ ಕಾರ್ಖಾನೆಗಳು ನೀಡುತ್ತಿವೆ ಎಂದು ಹೇಳಿದರು.
ಎಫ್‌ಆರ್‌ಪಿ ಹೆಚ್ಚಳ ಮಾಡಲು ಹಾಗೂ ರಫ್ತು ಹೆಚ್ಚಳ ಮಾಡಲು ಪ್ರಧಾನಿ ಮಧ್ಯ ಪ್ರವೇಶ ಮಾಡಬೇಕು. ನಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡುತ್ತಿದ್ದೇವೆ. ರೈತರು ಇನ್ನೂ ಹೆಚ್ಚು ದರವನ್ನು ಕೊಡುವಂತೆ ಕೇಳುತ್ತಿದ್ದಾರೆ. ಕೆಲವು ಕಾರ್ಖಾನೆಗಳು ನಿಗದಿಗಿಂತ ಹೆಚ್ಚಿನ ಹಣವನ್ನು ಸಹ ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರ ಕಡಲೆಕಾಯಿ ತಿನ್ನುತ್ತಿದೆಯಾ? ಅವರಿಗೂ ಜವಾಬ್ದಾರಿ ಇಲ್ಲವೇ ರೈತರು ಬೀದಿಗೆ ಬಂದಿರುವಾಗ ನಿದ್ರೆಗೆ ಜಾರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.