ಜಿಲ್ಲೆ

ಶಾಹು ಮಹಾರಾಜರ ನೀತಿ ಅನುಸರಿಸಿದ್ದ ನಾಲ್ವಡಿ

ತಿ.ನರಸೀಪುರ: ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಸಮಾನತೆ ಕಲ್ಪಿಸಲು ರಾಜಪ್ರಭುತ್ವದ ಆಡಳಿತದ ಕಾಲಘಟ್ಟದಲ್ಲೇ ಛತ್ರಪತಿ ಶಾಹು ಮಹಾರಾಜ್ ಅವರು ಮೊಟ್ಟ ಮೊದಲ ಬಾರಿಗೆ ಮೀಸಲಾತಿಯನ್ನು ಅನುಷ್ಠಾನಕ್ಕೆ ತಂದರು ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಗುರುವಾರ ಬಹುಜನ ಸಮಾಜ ಪಕ್ಷದ ವತಿಯಿಂದ ಆಯೋಜಿಸಿದ್ದ ಛತ್ರಪತಿ ಶಾಹು ಮಹಾರಾಜರ ಜಯಂತಿ ಹಾಗೂ ನರಸೀಪುರ ವಿಧಾನಸಭಾ ಕ್ಷೇತ್ರದ ಸೆಕ್ಟರ್ ಸಮಿತಿ ಪದಾಧಿಕಾರಿಗಳ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕೊಲ್ಲಾಪುರ ಸಂಸ್ಥಾನದ ದೊರೆಯಾಗಿದ್ದ ಶಾಹು ಮಹಾರಾಜರಿಗೆ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಭೂ ಒಡೆತನ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಸಮಾನ ಅವಕಾಶವನ್ನು ಕಲ್ಪಿಸಲು ಮೀಸಲಾತಿಯನ್ನು ಕಲ್ಪಿಸಿಕೊಟ್ಟ ಹೆಗ್ಗಳಿಕೆ ಸಲ್ಲಬೇಕು ಎಂದರು.

ಸಾಂಸ್ಕೃತಿಕ ರಾಜಧಾನಿ ಮೈಸೂರು ಸಂಸ್ಥಾನದ ಕಾಲದಲ್ಲಿ ಈ ಭಾಗದಲ್ಲಿದ್ದ ಲಿಂಗಾಯತರು ಹಾಗೂ ಒಕ್ಕಲಿಗ ಸಮುದಾಯಗಳು ಕೂಡ ಕೊಲ್ಲಾಪುರ ಮಾದರಿಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕೆಂದು ಧ್ವನಿಯೆತ್ತಿದರು. ಬಳಿಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಾಹು ಮಹಾರಾಜರ ನೀತಿಗಳನ್ನು ಅನುಸರಿಸಿದರು. ಬಳಿಕ ಸಂವಿಧಾನದಲ್ಲಿ ಅಂಬೇಡ್ಕರ್ ಅವರು ಸಮಾನತೆಗಾಗಿ ಮೀಸಲಾತಿಯನ್ನು ಜಾರಿಗೆ ತಂದರು ಎಂದರು.

ರಾಜ್ಯ ಕಾರ್ಯದರ್ಶಿ ಬಿ.ಆರ್.ಪುಟ್ಟಸ್ವಾಮಿ ಮಾತನಾಡಿ, ಬಹುಜನ ಸಮಾಜ ಪಕ್ಷವನ್ನು ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ಮಟ್ಟದಿಂದ ಸಂಘಟಿಸಲು ಸೆಕ್ಟರ್ ಸಮಿತಿಗಳನ್ನು ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಚಳವಳಿ ಮತ್ತು ಸಾಮಾಜಿಕ ಜಾಗೃತಿಯನ್ನು ನಿರಂತರವಾಗಿ ಮುಂದುವರಿಸುತ್ತಿರುವ ಪಕ್ಷವನ್ನು ಮುಂದಿನ ಚುನಾವಣೆಗಳಿಗೆ ಸಜ್ಜುಗೊಳಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಸಂಯೋಜಕರಾದ ಬಿ.ಮಹದೇವಸ್ವಾಮಿ, ದಂಡಿಕೆರೆ ಬಸವಣ್ಣ, ಜಿಲ್ಲಾ ಕಾರ್ಯದರ್ಶಿ ಅಂಕನಹಳ್ಳಿ ಪುಟ್ಟರಾಜು, ಕ್ಷೇತ್ರ ಸಂಯೋಜಕ ಆನಂದ್, ಪ್ರಧಾನ ಕಾರ್ಯದರ್ಶಿ, ಪುಟ್ಟಮರುಡಯ್ಯ, ನರಸಿಂಹರಾಜ ಕ್ಷೇತ್ರದ ಅಧ್ಯಕ್ಷ ನಂಜುಂಡಸ್ವಾಮಿ, ಜಿಲ್ಲಾ ಕಾರ್ಯದರ್ಶಿ, ರಂಗದಾಸಿ, ಪ್ರಧಾನ ಕಾರ್ಯದರ್ಶಿ ಗಂಗಾಧರ, ನಂಜನಗೂಡು ಅಧ್ಯಕ್ಷ ಪುರುಷನಾಥ್, ನಿವೃತ್ತ ಶಿಕ್ಷಕ ಜಯಪ್ಪ, ಮುಖಂಡರಾದ ಕೈಯಂಬಳ್ಳಿ ಪುಟ್ಟಸ್ವಾಮಿ, ಹಿರಿಯೂರು ಸಿದ್ದರಾಜು, ಮಾದಾಪುರ ಕಾಳಯ್ಯ, ಚೌಹಳ್ಳಿ ಶಿವಮೂರ್ತಿ, ರಿಯಾಜ್, ನಯಾಜ್ ಹಾಗೂ ಇತರರು ಇದ್ದರು.