ವಿಜಯಪುರ ನಗರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿದ್ಯಾರಣ್ಯ ಮಹಾಸ್ವಾಮಿಗಳ ಆರಾಧನೆ ಜರುಗಿತು. ವೇಮೂ ಯೋಗೇಶಭಟ್ ಜೋಶಿ, ಅರುಣ್ ಸೊಲ್ಲಾಪುರಕರ, ನಾರಾಯಣ ಕುಲಕರ್ಣಿ ಮತ್ತಿತರರಿದ್ದಾರೆ.  
ಜಿಲ್ಲೆ

ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ವಿದ್ಯಾರಣ್ಯರು; ವೇದ ಮೂರ್ತಿ ಯೋಗೇಶಭಟ್

ವಿಜಯಪುರ: ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದವರು ಶೃಂಗೇರಿ ಶಾರದಾ ಪೀಠದ 12ನೇ ಪೀಠಾಧಿಪತಿ ಜಗದ್ಗುರು ವಿದ್ಯಾರಣ್ಯ ಮಹಾಸ್ವಾಮೀಜಿ ಎಂದು ಕಲಬುರಗಿಯ ವೇಮೂ ಯೋಗೇಶಭಟ್ ಜೋಶಿ ಹೇಳಿದರು.

ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿದ್ಯಾರಣ್ಯ ವಿಪ್ರ ಸಂಘದ ಆಶ್ರಯದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಲಾತ್ಕಾರದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದು ಹಕ್ಕ-ಬುಕ್ಕರನ್ನು ಧರ್ಮಶಾಸ್ತ್ರದ ಪದ್ಧತಿಯಂತೆ ಪ್ರಾಯಶ್ಚಿತಾದಿಗಳನ್ನು ಮಾಡಿ ಹಿಂದೂ ಧರ್ಮಕ್ಕೆ ಕರೆದುಕೊಂಡು ಬಂದು ಅವರಿಂದ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿಸಿದ್ದು ವಿದ್ಯಾರಣ್ಯರು. ವಿಜಯನಗರ ಸಾಮ್ರಾಜ್ಯವನ್ನು 13-14ನೇ ಶತಮಾನದಲ್ಲಿಯೇ ವಿದೇಶಿಯರು ಬೆರಗಾಗಿ ನೋಡುವ ಹಾಗೆ ಅತಿ ವೈಭವೋಪೇತವಾಗಿ ಸಕಲ ಸಂಪತ್ ಸಮೃದ್ಧಿಯಿಂದ ರಾಜ್ಯವನ್ನು ನಿರ್ಮಾಣ ಮಾಡಿಸಿದ ಹೆಗ್ಗಳಿಕೆ ವಿದ್ಯಾರಣ್ಯರದಾಗಿತ್ತು ಎಂದರು.

ಹೊಸದಾದ ರಾಜ್ಯವನ್ನು ಸ್ಥಾಪನೆ ಮಾಡಲು ಧನದ ಅವಶ್ಯಕತೆ ಬಹಳಷ್ಟು ಬೇಕು ಎಂದು ತಿಳಿಸಿದ ಅವರು, ಈ ಧನದ ಅವಶ್ಯಕತೆಯನ್ನು ಪೂರೈಸಲು ಜಗದ್ಗುರು ವಿದ್ಯಾರಣ್ಯ ಮಹಾಸ್ವಾಮಿಗಳು ಗಾಯತ್ರಿ ಮಂತ್ರದ ಪುರಶ್ಚರಣವನ್ನು ಮಾಡಿ ಸುವರ್ಣ ವೃಷ್ಟಿಯನ್ನು (ಬಂಗಾರದ ಸುರಿಮಳೆ) ಮಾಡಿಸಿದರು ಎಂಬುದು ಅನೇಕ ಜನರ ನಂಬಿಕೆಯಾಗಿದೆ. ಈ ಒಂದು ಐಶ್ವರ್ಯದಿಂದ ವಿಜಯನಗರ ಸಾಮ್ರಾಜ್ಯವನ್ನು ನಿರ್ಮಾಣ ಮಾಡಿದರು ಎಂದು ಬಣ್ಣಿಸಿದರು.

ವಿದ್ಯಾರಣ್ಯರು ಅನೇಕ ಗ್ರಂಥಗಳನ್ನು ಕೂಡ ರಚನೆ ಮಾಡಿದ್ದರಲ್ಲದೇ ಅವರು ಸಂಗೀತದ ಪ್ರಪಿತಾಮಹರು ಆಗಿದ್ದಾರೆ. ಇಂತಹ ಜಗದ್ಗುರುಗಳ ಸ್ಮರಣೆಯನ್ನು ಪ್ರತಿಯೊಬ್ಬ ಕನ್ನಡಿಗನು ಮಾಡಿಕೊಂಡು ಅವರಿಗೆ ಕೃತಜ್ಞತೆ ಸಲ್ಲಿಸುವುದು ಕರ್ತವ್ಯವೇ ಆಗಿದೆ ಎಂದರು.

ಮುಖಂಡರಾದ ಅರುಣ್ ಸೊಲ್ಲಾಪುರಕರ, ನಾರಾಯಣ ಕುಲಕರ್ಣಿ, ದಿವಾಕರ ಉಪಾಧ್ಯೆ, ಗೋವಿಂದ ಭಟ್ ಜೋಶಿ, ಸಂಜೀವಭಟ್ಟ ಬೀಳಗಿ ಮತ್ತಿತರರಿದ್ದರು.