ಜಿಲ್ಲೆ

ಹಬ್ಬಗಳಿಂದ ಧರ್ಮದ ತಳಹದಿ ಭದ್ರ: ಈಶ್ವರಚಂದ್ರ ಭಟ್ ಹೇಳಿಕೆ

ಕಡಬ: ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಹಿರಿಯರು ಆಚರಿಸಿಕೊಂಡು ಬಂದ ಹಿಂದು ಧರ್ಮದ ಆಚರಣೆಗಳು, ಧಾರ್ಮಿಕ ತಳಹದಿಯನ್ನು ಗಟ್ಟಿಗೊಳಿಸುತ್ತವೆ. ಯುವ ಜನತೆ ರಾಷ್ಟ್ರಪ್ರೇಮಿಗಳಾಗಿ ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ಈಶ್ವರಚಂದ್ರ ಭಟ್ ಹೇಳಿದರು.

ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂದಿರದಲ್ಲಿ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಶ್ರೀಲಕ್ಷ್ಮೀನರಸಿಂಹ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಗೌಡ ಮೀಜೆ ಅಧ್ಯಕ್ಷತೆ ವಹಿಸಿದ್ದರು. ಕಾಣಿಯೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷ ರವಿಕುಮಾರ್ ನೇರೋಳ್ತಡ್ಕ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ, ಯುವಕ ಮಂಡಲದ ಉಪಾಧ್ಯಕ್ಷ ಧರ್ಮಪಾಲ ಕಲ್ಪಡ, ಯೋಗ ತರಬೇತುದಾರ ಮುಕುಂದ ಕೇಶವ ಕಲ್ಪಡ ಉಪಸ್ಥಿತರಿದ್ದರು. ಯುವಕ ಮಂಡಲದ ಸದಸ್ಯ ಕೀರ್ತಿ ಕುಮಾರ್ ಏಳುವೆ ಬಹುಮಾನಿತರ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ದೀಕ್ಷಿತ್ ಕಂಪ ಸ್ವಾಗತಿಸಿ, ಗೌರವಾಧ್ಯಕ್ಷ ಸುರೇಶ್ ಓಡಬಾಯಿ ವಂದಿಸಿದರು.

ಯುವಕ ಮಂಡಲದ ಮಾಜಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ ನಿರೂಪಿಸಿದರು. ಮಕ್ಕಳಿಗೆ ಮುದ್ದುಕೃಷ್ಣ ವೇಷ ಸ್ಪರ್ಧೆ, ಪುರುಷರಿಗೆ, ಮಹಿಳೆಯರಿಗೆ ಮತ್ತು ಶಾಲಾ ಬಾಲಕ, ಬಾಲಕಿಯರ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.