ಮಡಿಕೇರಿ: ಕೊಡಗಿನ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ.ಬೋಪಯ್ಯರವರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಸುಧೀರ್ಘ ಅವಧಿ ಶಾಸಕರಾಗಿ ಅಧಿಕಾರ ನಡೆಸಿದ ಮಾಜಿ ಶಾಸಕರು ಕೊಡಗಿನ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿದ್ದಾರೆ. ಈ ಮೂಲಕ ಜನತೆಗೆ ದ್ರೋಹ ಬಗೆದು ಈಗಿನ ಸರ್ಕಾರವನ್ನು ಟೀಕಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಕುಟುಕಿದ್ದಾರೆ.
ನೂತನ ಶಾಸಕರು ಅಧಿಕಾರಿಕ್ಕೆ ಬಂದ ನಂತರ ಮೂವತ್ತು ಸಾವಿರಕ್ಕೂ ಅಧಿಕ ಅರ್ಜಿಗಳು ಸಾರ್ವಜನಿಕರಿಂದ ಬಂದಿದ್ದು, ಮಾಜಿ ಶಾಸಕರ ವೈಫಲ್ಯಕ್ಕೆ ಕೈಗನ್ನಡಿಯಾಗಿದೆ. ಈಗ ಜನಪರ ಕಾಳಜಿ ಹೊಂದಿರುವ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡರವರ ಬಳಿ ಜನ ವಿಶ್ವಾಸದಿಂದ ಬಂದು ತಮ್ಮ ಸಮಸ್ಯೆಯನ್ನು ವಿವರಿಸುತ್ತಿದ್ದಾರೆ. ಜನತೆಯ ಎಲ್ಲಾ ಸಮಸ್ಯೆಗಳನ್ನು ಹಂತ, ಹಂತವಾಗಿ ಪರಿಹರಿಸಲು ನೂತನ ಶಾಸಕರು ಬದ್ಧರಾಗಿದ್ದಾರೆ ಎಂದು ತೆನ್ನಿರ ಮೈನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.