ಪಾಂಡವಪುರ: ಪುರಸಭೆ ಮುಖ್ಯಾಧಿಕಾರಿ ವೀಣಾ ಅವರನ್ನು ವರ್ಗಾವಣೆಗೊಳಿಸಿ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿದ್ದರೂ, ಹುದ್ದೆಯಿಂದ ಬಿಡುಗಡೆಗೊಳ್ಳದೆ ಮುಂದುವರಿದಿದ್ದು, ಸರ್ಕಾರದ ಆದೇಶದಂತೆ ಅವರನ್ನು ಹುದ್ದೆಯಿಂದ ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಯೋಧ ಹೊನ್ನಗಿರಿಗೌಡ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಎಂ.ಎಲ್.ನಂದೀಶ್ ಅವರಿಗೆ ಮನವಿ ನೀಡಿದರು.
ಪಟ್ಟಣದ ಐದು ದೀಪ ವೃತ್ತದಲ್ಲಿ ಧರಣಿ ನಡೆಸಿದ ಅವರು, ಸರ್ಕಾರದ ನಿರ್ದೇಶನದಂತೆ ಪೌರಾಡಳಿತ ನಿರ್ದೇಶನಾಲಯ ಪಾಂಡವಪುರ ಪುರಸಭೆ ಮುಖ್ಯಾಧಿಕಾರಿ ವೀಣಾ ಅವರನ್ನು ಎರಡು ಬಾರಿ ವರ್ಗಾವಣೆಗೊಳಿಸಿ ಆ ಹುದ್ದೆಗೆ ಬೇರೆಯವರನ್ನು ನಿಯುಕ್ತಿಗೊಳಿಸಿತ್ತು. ಆದರೆ ಮೊದಲ ವರ್ಗಾವಣೆಯನ್ನು ಹತ್ತು ದಿನಗಳ ಅಂತರದಲ್ಲಿ ರದ್ದುಪಡಿಸಿಕೊಂಡ ವೀಣಾ ಅವರು ಸರ್ಕಾರದಿಂದ ಮುಂದುವರಿಸುವ ಆದೇಶ ಪಡೆದುಕೊಂಡರು. ಆದರೆ ಪೌರಾಡಳಿತ ನಿರ್ದೇಶನಾಲಯದ ಎರಡನೇ ಆದೇಶವನ್ನು ಧಿಕ್ಕರಿಸಿದ್ದು, ಸರ್ಕಾರ ಸೂಚಿಸಿರುವ ಸ್ಥಳಕ್ಕೆ ನಿಯುಕ್ತಿಗೊಳ್ಳದೇ ಕಳೆದ ಹತ್ತು ತಿಂಗಳಿನಿಂದ ಮುಖ್ಯಾಧಿಕಾರಿಗಳ ಹುದ್ದೆಯಲ್ಲೇ ಮುಂದುವರಿದಿದ್ದಾರೆ. ಹೀಗಾಗಿ ಅವರನ್ನು ಹುದ್ದೆಯಿಂದ ತಕ್ಷಣ ಬಿಡುಗಡೆಗೊಳಿಸುವ ಮೂಲಕ ಪುರಸಭೆಯಲ್ಲಿ ಪಾರದರ್ಶಕ ಆಡಳಿತಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸುಮಾರು ವರ್ಷಗಳಿಂದ ವರ್ಗಾವಣೆಗೊಳ್ಳದೆ ಮುಖ್ಯಾಧಿಕಾರಿ ಆಗಿ ವೀಣಾ ಅವರು ಮುಂದುವರಿದಿದ್ದಾರೆ. ಇದೇ ರೀತಿ ಹುದ್ದೆಯಲ್ಲಿ ಮುಂದುವರಿದರೆ ಪುರಸಭೆಯಲ್ಲಿ ಅಕ್ರಮಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ. ಜತೆಗೆ ಪೌರಾಡಳಿತ ನಿರ್ದೇಶನಾಲಯದ ಮೈಸೂರು ವಿಭಾಗಾಧಿಕಾರಿ ಸರ್ಕಾರದ ಆದೇಶದ ಪಾಲಿಸದ ಮುಖ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ. ಆದರೂ, ಈವರೆಗೂ ಯಾವುದೇ ಕ್ರಮ ಜರುಗಿಲ್ಲ. ಹೀಗಾಗಿ ತಕ್ಷಣ ಕ್ರಮಕೈಗೊಂಡು ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.