ನಿತ್ಯಾನಂದ ಶಿವಗಂಗೆ ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಪ್ರದೇಶದ ಜನ ವನ್ಯಜೀವಿಗಳೊಂದಿಗಿನ ಸಂಘರ್ಷದಿAದಾಗಿ ಬದುಕುವುದು ದಿನೇ ದಿನೇ ಕಷ್ಟವಾಗುತ್ತಿದೆ. ಕಾಡಾನೆ, ಕಾಡುಕೋಣಗಳು ಸೇರಿದಂತೆ ಇತರೆ ಪ್ರಾಣಿಗಳ ಹಾವಳಿ ದಿನೇ ದಿನೇ ಹೆಚ್ಚಾಗಲಾರಂಭಿಸಿದೆ. ಇದರ ಬೆನ್ನಲ್ಲೇ ಇದೀಗ ಮೈಸೂರು ಪ್ರದೇಶಿಕ ವಿಭಾಗದಲ್ಲಿ ಸೆರೆಹಿಡಿಯಲಾಗಿದ್ದ ಮಾನವನೊಂದಿಗೆ ಸಂಘರ್ಷ ಹೊಂದಿದ್ದ ಹುಲಿಯನ್ನು ಭದ್ರಾ ಅಭಯಾರಣ್ಯ ವ್ಯಾಪ್ತಿಯ ಮುತ್ತೋಡಿ ಸಮೀಪದ ಮೇಲಿನ ಹುಲುವತ್ತಿ ಗ್ರಾಮಕ್ಕೆ ಸಮೀಪದ ಅರಣ್ಯ ಪ್ರದೇಶಕ್ಕೆ ತಂದು ಬಿಟ್ಟಿರುವುದು ಇದೀಗ ಜನರಿಗೆ ಹೊಸ ಆತಂಕ ಎದುರಾಗಿದೆ.
ಹೌದು. ಬಂಡಿಪುರ ಅಭಯಾರಣ್ಯದಲ್ಲಿ ಮಾನವರೊಂದಿಗೆ ಸಂಘರ್ಷ ಹೊಂದಿದೆ ಎಂಬ ಕಾರಣದಿಂದಾಗಿ ಮೂರರಿಂದ ನಾಲ್ಕು ವರ್ಷ ಪ್ರಾಯದ ಗಂಡು ಹುಲಿಯನ್ನು ೨೦೨೪ರ ಫೆ. ೧೫ರಂದು ಸೆರೆ ಹಿಡಿಯಲಾಗಿತ್ತು. ಬಳಿಕ ಈ ಹುಲಿಯನ್ನು ತಂದು ಯಾವುದೇ ಮಾಹಿತಿಯನ್ನೂ ನೀಡದೆ ಅರಣ್ಯ ಇಲಾಖೆ ಭದ್ರಾ ಅಭಯಾರಣ್ಯ ವ್ಯಾಪ್ತಿಗೆ ತಂದು ಬಿಟ್ಟಿದೆ.
ಮೇಲಿನ ಹುಲುವತ್ತಿ ಅರಣ್ಯ ಪ್ರದೇಶದಲ್ಲಿ ರೇಡಿಯೋ ಕಾಲರ್ ಅಳವಡಿಕೆ ಮಾಡಿ ಹುಲಿಯನ್ನು ಬಿಡಲಾಗಿದ್ದು, ಈ ಅರಣ್ಯ ಪ್ರದೇಶದ ಅಕ್ಕಪಕ್ಕದಲ್ಲೇ ಹತ್ತಾರು ಗ್ರಾಮಗಳಿವೆ. ಮೊದಲೇ ಮಾನವರೊಂದಿಗೆ ಸಂಘರ್ಷ ಹೊಂದಿರುವ ಹುಲಿ ಗ್ರಾಮಗಳತ್ತ ಬಂದರೆ ದೊಡ್ಡ ಅನಾಹುತ ಸಂಭವಿಸುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಿದ್ದಾರೆ ಸ್ಥಳೀಯರು.
ಹುಲಿಯನ್ನು ಗೋಪ್ಯವಾಗಿ ಮೈಸೂರಿನಿಂದ ತಂದು ಭದ್ರಾ ಅಭಯಾರಣ್ಯದಲ್ಲಿ ಬಿಡುವ ಅಗತ್ಯ ಏನಿತ್ತು ಎಂದು ಇದೀಗ ಸ್ಥಳೀಯರು ಪ್ರಶ್ನಿಸಲಾರಂಭಿಸಿದ್ದಾರೆ. ಭದ್ರಾ ಅಭಯಾರಣ್ಯದಲ್ಲೇ ಸಾಕಷ್ಟು ಹುಲಿಗಳಿವೆ. ಹೀಗಿರುವಾಗ ಬಂಡಿಪುರದಲ್ಲಿ ಸೆರೆ ಹಿಡಿದ ಹುಲಿಯನ್ನು ಅಲ್ಲೇ ಬಂಡೀಪುರ, ನಾಗರಹೊಳೆ ಅರಣ್ಯದಲ್ಲಿ ಬಿಡಲು ಅವಕಾಶವಿತ್ತು. ಆದರೆ ಅರಣ್ಯ ಇಲಾಖೆ ಇಲ್ಲಿನ ಜನರ ಜೀವದ ಜೊತೆಗೆ ಚೆಲ್ಲಾಟ ನಡೆಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳ ಹುಚ್ಚು ಪ್ರಯೋಗಗಳಿಂದಾಗಿ ಸ್ಥಳೀಯ ನಿವಾಸಿಗಳು ಜೀವ ಭಯದಲ್ಲೇ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಅವೈಜ್ಞಾನಿಕವಾಗಿ ಮತ್ತು ಕಾನೂನು ಉಲ್ಲಂಘನೆ ಮಾಡಿ ಭದ್ರಾ ಅಭಯಾರಣ್ಯದಲ್ಲಿ ಹುಲಿ ಬಿಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸ್ಥಳೀಯ ಜನ ಪ್ರತಿನಿಧಿಗಳ ಗಮನಕ್ಕೆ ತರದೆ ಹುಲಿ ಬಿಟ್ಟ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ರೇಡಿಯೋ ಕಾಲರ್ ಅಳವಡಿಕೆ
ಬಂಡಿಪುರದಲ್ಲಿ ಸೆರೆ ಹಿಡಿದ ಹುಲಿಯನ್ನು ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಬಿಡುವ ವೇಳೆ ಹುಲಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗಿದೆ. ಆದರೆ ರೇಡಿಯೋ ಕಾಲರನ್ನು ತಜ್ಞರು ಅಳವಡಿಕೆ ಮಾಡಿಲ್ಲ. ಬದಲಿಗೆ ಪಶುವೈದ್ಯಾಧಿಕಾರಿಯೊಬ್ಬರು ರೇಡಿಯೋ ಕಾಲರ್ ಅಳವಡಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಲು ಭದ್ರಾ ಅಭಯಾರಣ್ಯದ ನಿರ್ದೇಶಕರಾಗಲಿ ಅಥವಾ ಇತರೆ ಅಧಿಕಾರಿಗಳಾಗಲಿ ಹಿಂದೇಟು ಹಾಕುತ್ತಿದ್ದಾರೆ.
ನಿಯಮ ಗಾಳಿಗೆ ತೂರಿದ ಅಧಿಕಾರಿಗಳು
ಯಾವುದೇ ಪ್ರದೇಶದಲ್ಲಿ ಹುಲಿಯನ್ನು ಸೆರೆಹಿಡಿಯುವಾಗ ಆಗಲಿ ಅಥವಾ ಒಂದು ಪ್ರದೇಶದಲ್ಲಿ ಹುಲಿಯನ್ನು ಬಿಡುವ ಮುನ್ನ ಸ್ಥಳೀಯ ಗ್ರಾಪಂ ಸದಸ್ಯರಿಗೆ ಮಾಹಿತಿ ನೀಡಿ ಅವರನ್ನು ವಿಶ್ವಾಸಕ್ಕೆ ಪಡೆಯಬೇಕು ಹಾಗೂ ಪ್ರದೇಶದಲ್ಲಿ ವಾಸಿಸುತ್ತಿರುವ ಹಳ್ಳಿಗರಿಗೂ ಮಾಹಿತಿ ನೀಡಬೇಕು ಎಂಬುದು ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮ. ಆದರೆ ಭದ್ರಾ ಅಭಯಾರಣ್ಯದಲ್ಲಿ ಹುಲಿಯನ್ನು ಬಿಡುವ ವೇಳೆ ಈ ಯಾವುದೇ ನಿಯಮವನ್ನು ಪಾಲಿಸಿಯೇ ಇಲ್ಲ. ಹುಲಿಯನ್ನು ತಮ್ಮ ಊರಿನ ವ್ಯಾಪ್ತಿಯ ಕಾಡಿನಲ್ಲಿ ಬಿಟ್ಟಿರುವ ವಿಷಯ ಜನರಿರಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಗೊತ್ತಾಗಿz್ದೆà ಹಲವು ದಿನಗಳ ಬಳಿಕ ಎಂಬುದು ಇನ್ನೊಂದು ವಿಶೇಷವಾಗಿದೆ.
ಕಾಡಿನಿಂದ ಹೊರಬಂದಿದೆಯೇ ವ್ಯಾಘ್ರ
ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಬಿಟ್ಟ ಹುಲಿ ಕಾಡಿನಿಂದ ಹೊರಗೆ ಬಂದಿದೆಯೇ ಎಂಬ ಅನುಮಾನಗಳೂ ಇದೀಗ ಮೂಡಲಾರಂಭಿಸಿವೆ. ಭದ್ರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ೨೫ ವರ್ಷ ತುಂಬಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಹೊರ ತಂದಿರುವ ಕೈಪಿಡಿಯಲ್ಲಿ ಈ ಕುರಿತ ಮಾಹಿತಿ ಇದೆ.
ಅರಣ್ಯ ಇಲಾಖೆಯೇ ಅಧಿಕೃತವಾಗಿ ಹುಲಿ ಸಂಚಾರ ನಡೆಸಿರುವ ಮ್ಯಾಪ್ ಹಾಕಿದ್ದಾರೆ. ಈ ಮ್ಯಾಪ್ ಪ್ರಕಾರ ಹುಲಿ ಜನ ವಸತಿ ಪ್ರದೇಶದ ಸಮೀಪವೂ ಸಂಚಾರ ನಡೆಸಿರುವುದು ಜನರ ಆತಂಕ ಹೆಚ್ಚಲು ಕಾರಣವಾಗಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಹುಲಿ ಎಲ್ಲೆಲ್ಲಿ ಓಡಾಡಿದೆ ಎಂಬ ಮಾಹಿತಿ ನೀಡಬೇಕು. ಜೊತೆಗೆ ಹುಲಿ ತನ್ನದೇ ಆದ ಟೆರಿ ಟೆರಿ ಗುರುತಿಸಿಕೊಂಡಿದೆಯೇ ಎಂಬ ಮಾಹಿತಿ ನೀಡಬೇಕು ಎಂಬುದು ವನ್ಯಜೀವಿ ಪ್ರಿಯರು ಹಾಗೂ ಸ್ಥಳೀಯರ ಒತ್ತಾಯವಾಗಿದೆ.
ಹಿಂದೆಯೂ ಇತ್ತು ನರಭಕ್ಷಕ ಹುಲಿ
ಚಿಕ್ಕಮಗಳೂರಿನ ಪಂಡರವಳ್ಳಿ ಅರಣ್ಯ ಪ್ರದೇಶದಲ್ಲಿ ನರಭಕ್ಷಕ ಹುಲಿ ಜನರ ನಿದ್ದೆಗೆಡಿಸಿತ್ತು. ಈ ಹಿನ್ನೆಲೆಯಲ್ಲಿ ೨೦೧೫ರಲ್ಲಿ ಹುಲಿಯನ್ನು ಪಂಡರವಳ್ಳಿಯಲ್ಲಿ ಸೆರೆ ಹಿಡಿದು ಬೆಳಗಾವಿ ಜಿಲ್ಲೆಯ ಭೀಮಘಡ ಅರಣ್ಯ ಪ್ರದೇಶದಲ್ಲಿ ಬಿಡಲಾಗುತ್ತು. ಆದರೆ ಅಲ್ಲಿಯೂ ಹುಲಿ ಓರ್ವ ಮಹಿಳೆಯನ್ನು ಕೊಂದು ತಿಂದಿತ್ತು. ಹೀಗಾಗಿ ಆ ಹುಲಿಯನ್ನು ಅಲ್ಲಿ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಈಗ ಮತ್ತೆ ಭದ್ರಾ ಅಭಯಾರಣ್ಯಕ್ಕೆ ಇದೇ ರೀತಿ ಮಾನವರೊಂದಿಗೆ ಸಂಘರ್ಷ ಹೊಂದಿದ ಹುಲಿಯನ್ನು ಬಿಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದಲ್ಲದೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಗಾಮ ಗ್ರಾಮದಲ್ಲಿ ೨೦೧೧ರಲ್ಲಿ ಸೆರೆ ಸಿಕ್ಕ ಹುಲಿಯನ್ನು ಭದ್ರಾ ಅಭಯಾರಣ್ಯಕ್ಕೆ ಬಿಡಲಾಗಿತ್ತು. ಆದರೆ ಈ ಹುಲಿ ಅಭಯಾರಣ್ಯದಲ್ಲಿನ ಇನ್ನೊಂದು ಹುಲಿಯೊಂದಿಗೆ ಕಾದಾಟ ನಡೆಸಿ ಸಾವನ್ನಪ್ಪಿತ್ತು.
ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಹುಲಿ ಹಾಗೂ ಚಿರತೆಗಳ ಸಂಖ್ಯೆ ಹೆಚ್ಚಿದೆ ಎಂದು ತೋರಿಸಲು ಬೇರೆಡೆ ಸೆರೆಹಿಡಿದವುಗಳನ್ನು ಇಲ್ಲಿ ತಂದು ಬಿಡಲಾಗುತ್ತಿದೆ. ಕೆಲ ತಿಂಗಳ ಹಿಂದೆ ಹುಲಿಯನ್ನು ಬಿಡುವಾಗಲೂ ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡಿಲ್ಲ. ಹುಲಿ ಎಲ್ಲಿ ಸಂಚಾರ ನಡೆಸುತ್ತಿದೆ ಎಂಬ ಮಾಹಿತಿಯೂ ಇಲ್ಲವಾಗಿದೆ. ಹೀಗಾಗಿ ಜನ ಆತಂಕದಲ್ಲೇ ಬದುಕುವಂತಾಗಿದೆ. ಕೂಡಲೇ ಭದ್ರಾದಲ್ಲಿ ಬಿಟ್ಟಿರುವ ಹುಲಿಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು.
ಜಾನಕಿರಾಮ್, ಮೇಲಿನ ಹುಲುವತ್ತಿ ಗ್ರಾಪಂ ಅಧ್ಯಕ್ಷ