ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗ ಸೋಮವಾರ ಅಂಗವಿಕಲ ಕಾರ್ಯಕರ್ತರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮೈಸೂರಿನಲ್ಲಿರುವ ಸಿದ್ದರಾಮಯ್ಯ ಅವರ ನಿವಾಸದವರೆಗೂ ಪಾದಯಾತ್ರೆ ಆರಂಭಿಸಿದರು. 
ಜಿಲ್ಲೆ

ಶ್ರೀರಂಗಪಟ್ಟಣದಲ್ಲಿ ಪಾದಯಾತ್ರೆ ಆರಂಭ

ಮಾದೇಶ್ ತಿ.ನರಸೀಪುರ

ಶ್ರೀರಂಗಪಟ್ಟಣ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವವರಿಗೆ ಕನಿಷ್ಠ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ಅಂಗವಿಕಲರ ಗೌರವಧನ ಪುನರ್ವಸತಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗ ಸೋಮವಾರ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಜಮಾಯಿಸಿದ್ದ ಸಹಸ್ರಾರು ಸಂಖ್ಯೆಯ ನವಕರ್ನಾಟಕ ಎಂಆರ್‌ಡಬ್ಲುೃ, ವಿಆರ್‌ಡಬ್ಲುೃ ಹಾಗೂ ಯೂಆರ್‌ಡಬ್ಲುೃ ಅಂಗವಿಕಲರ ಗೌರವಧನ ಕಾರ್ಯಕರ್ತರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೈಸೂರಿನ ನಿವಾಸದವರೆಗೂ ಪಾದಯಾತ್ರೆ ಆರಂಭಿಸಿದರು.

ನವಕರ್ನಾಟಕ ಒಕ್ಕೂಟದ ಸಂಸ್ಥಾಪಕ ಡಾ.ಅಂಬಾಜಿ ಮೇಟಿ ಮಾತನಾಡಿ, ಗ್ರಾಮೀಣ ಪುನರ್ವಸತಿ ಹಾಗೂ ನಗರ ಪುನರ್ವಸತಿಯ ಸಾವಿರಾರು ಕಾರ್ಯಕರ್ತರು ಕಳೆದ 17 ವರ್ಷಗಳಿಂದ ಯಾವುದೇ ಸೇವಾ ಭದ್ರತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ಅಂಗವಿಕಲರಿಗಾಗಿ ಸೇವೆ ಮಾಡುತ್ತಿರುವ ಕಾರ್ಯಕರ್ತರ ಹಲವು ಬೇಡಿಕೆಗಳ ಈಡೇರಿಕೆಗಾಗಿ ಹಲವು ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ನೀಡಿ ಬೇಡಿಕೊಂಡಿದ್ದರೂ ಮನವಿಗೆ ಯಾವ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದರು.

ಕನಿಷ್ಠ ವೇತನ ಹಾಗೂ ಸೇವಾ ಕಾಯಂಗೊಳಿಸುವಂತೆ ಒತ್ತಾಯಿಸಿ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿಗೆ ಪೂಜಿಸಿ ಇಲ್ಲಿಂದ ಮೈಸೂರಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದವರೆಗೂ ಪಾದಯಾತ್ರೆ ಮೂಲಕ ಪ್ರತಿಭಟನಾ ರ‌್ಯಾಲಿ ನಡೆಸಿ ಬಳಿಕ ಧರಣಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದರು.

ಎಂಆರ್‌ಡಬ್ಲುೃ, ವಿಆರ್‌ಡಬ್ಲುೃ, ಯೂಆರ್‌ಡಬ್ಲುೃ ಒಕ್ಕೂಟದ ಅಧ್ಯಕ್ಷ ಫಕೀರ್ ಗೌಡ, ಪ್ರಧಾನ ಕಾರ್ಯದರ್ಶಿ ಎಸ್.ಕೃಷ್ಣಪ್ಪ, ಕರ್ನಾಟಕ ರಾಜ್ಯ ಒಕ್ಕೂಟದ ಅಧ್ಯಕ್ಷ ಕೆ.ಎಸ್.ಸುಬ್ರಮಣ್ಯಂ, ಮೈಸೂರು ಜಿಲ್ಲಾ ಒಕ್ಕೂಟದ ಅಧ್ಯಕ್ಷ ಸಿ.ಜೆ.ದೀಕ್ಷಿತ್, ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಮಹದೇವಪ್ಪ, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜು, ಕಾರ್ಯದರ್ಶಿ ಆರ್.ಎನ್.ಸ್ವಾಮಿ, ಮಹದೇವಯ್ಯ, ಶ್ರೀರಂಗಪಟ್ಟಣ ಘಟಕದ ಅಧ್ಯಕ್ಷ ಕೃಷ್ಣಪ್ಪ ಇತರರು ಇದ್ದರು.