ಸಕಲೇಶಪುರ: ತಾಲೂಕಿನ ಬಾಳ್ಳುಪೇಟೆ ದೇವಿರಮ್ಮ ದೇವಸ್ಥಾನದ ಬೀಗ ಮುರಿದು ದೇವರ ಮುಖವಾಡ ಹಾಗೂ ಹಲವು ವಸ್ತುಗಳನ್ನು ಮಂಗಳವಾರ ಮುಂಜಾನೆ ಕಳವು ಮಾಡಲಾಗಿದೆ.
ದೇವಸ್ಥಾನದಲ್ಲಿ ಸಿಸಿ ಕ್ಯಾಮರಾಗಳಿದ್ದರೂ ಕಳ್ಳರು ಚಾಲಾಕಿತನದಿಂದ ಮುಖಕ್ಕೆ ಬಟ್ಟೆ ಸುತ್ತಿಕೊಂಡು ದೇವಸ್ಥಾನ ಪ್ರವೇಶಿಸಿ ಕ್ಯಾಮರಾಗಳನ್ನು ತಿರುಗಿಸಿ ಒಳ ಪ್ರವೇಶಿಸಿದ ಕಳ್ಳರು, ಕಬ್ಬಿಣದ ಪೆಟ್ಟಿಗೆಯಲ್ಲಿದ್ದ 5 ದೇವರುಗಳ ಮುಖವಾಡಗಳನ್ನು ಕದ್ದೊಯ್ದಿದ್ದಾರೆ. ದೇವಿರಮ್ಮ ದೇವಸ್ಥಾನದ ಮುಂಭಾಗ ಇರುವ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲೂ ಈ ಹಿಂದೆ ಎರಡು ಬಾರಿ ದೇವಸ್ಥಾನದ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದರು. ದೇವಸ್ಥಾನ ಸಮಿತಿಯ ದೂರು ಆಧರಿಸಿ ಗ್ರಾಮಾಂತರ ಠಾಣಾ ಪೊಲೀಸರು ಬೆರಳಚ್ಚು ತಜ್ಞರು ಹಾಗೂ ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ದೇವಸ್ಥಾನ ಇದ್ದರೂ ಕಳ್ಳತನ ನಡೆದಿರುವುದು ಗ್ರಾಮಸ್ಥರಲ್ಲಿ ಆಘಾತ ತಂದಿದೆ. ವಿಷಯ ತಿಳಿದು ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.