ಜಿಲ್ಲೆ

ಮೇಘದೂತದ ಮೊದಲ ಅನುವಾದಕರು ಶಾಂತಕವಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿರಹದ ಶಾಪವನ್ನು ಪಡೆದ ಯಕ್ಷನೊಬ್ಬನ ಕಲ್ಪನಾ ವಿಲಾಸವೇ ಕಾಳಿದಾಸನ ಮೇಘದೂತ. ಈ ಕಾವ್ಯಕ್ಕೆ ವಸ್ತು, ಕತೆ ಎಂಬುದಿಲ್ಲ. ಅನೇಕರು ಕನ್ನಡಕ್ಕೆ ಇದನ್ನು ಅನುವಾದಿಸಿದರು. ಅದರಲ್ಲಿ ಮೊದಲಿಗರು ಶಾಂತ ಕವಿಗಳು ಎಂಬುದು ಹೆಮ್ಮೆಯ ವಿಚಾರ ಎಂದು ವಿದ್ವಾಂಸ ಡಾ. ಶ್ರೀರಾಮ ಭಟ್​ ಹೇಳಿದರು.

ನಗರದ ರಂಗಾಯಣ ಹಾಗೂ ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್​ ಸಹಯೋಗದಲ್ಲಿ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕನ್ನಡದ ಆದ್ಯ ನಾಟಕಕಾರ ಹಾಗೂ ಕೀರ್ತನಕಾರ ಸಕ್ಕರಿ ಬಾಳಾಚಾರ್ಯರ ಜನ್ಮದಿನ ನಿಮಿತ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ಶಾಂತಕವಿಗಳು 1892ರಲ್ಲಿ ರಚಿಸಿದ ಅನುವಾದಿತ ಮೇಘದೂತ ಕಾವ್ಯದಲ್ಲಿ ನಲ್ಲೆಗೆ ಕಳುಹಿಸುವ ಸಂದೇಶವನ್ನು ವರ್ಣಿಸಲಾಗಿದೆ. ಜನರ ಸಂವೇದನೆ, ಆಹಾರ, ವಿಚಾರಗಳು ಸೇರಿ ಹಲವಾರು ವಿಷಯಗಳು ಇವೆ. ದೇಸಿ ಭಾಷೆ ಮೂಲಕ ಓದುಗರಿಗೆ ಕಾವ್ಯವನ್ನು ವರ್ಣರಂಜಿತವಾಗಿ ಸವಿಯುವಂತೆ ಬಾಳಾಚಾರ್ಯರು ಅನುವಾದಿಸಿದ್ದಾರೆ ಎಂದರು.

ಹಿರಿಯ ಸಾಹಿತಿ ಡಾ.ಶ್ಯಾಮಸುಂದರ ಬಿದರಕುಂದಿ ಮಾತನಾಡಿ, ಸಂಸ್ಕೃತದಿಂದ ರಚಿತವಾದ ಕಾವ್ಯ, ನಾಟಕ ಹಾಗೂ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಸಾಹಿತ್ಯಕ್ಕೆ ಬಾಳಾಚಾರ್ಯರು ನೀಡಿದ ವಿಚಾರಗಳು ವಿಸ್ತಾರ ಸ್ವರೂಪ ಪಡೆದಿವೆ. ಅನೇಕ ಕವಿಗಳು ಕನ್ನಡಕ್ಕೆ ಕೃತಿಗಳನ್ನು ಅನುವಾದಿಸುವ ಮೂಲಕ ಸುಲಭವಾಗಿ ಕಾವ್ಯ, ಕೃತಿಗಳನ್ನು ಕನ್ನಡಿಗರು ಓದಿ ಅವುಗಳನ್ನು ಆಸ್ವಾದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಕ್ಕರಿ ಬಾಳಾಚಾರ್ಯರು ಕೃತಿಗಳು, ಕಾವ್ಯಗಳು ಹಾಗೂ ನಾಟಕಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ಟ್ರಸ್ಟ್​ ಅಧ್ಯಕ್ಷ ಬಾಬುರಾವ್​ ಸಕ್ಕರಿ, ಸದಸ್ಯರಾದ ಅರವಿಂದ ಕುಲಕರ್ಣಿ, ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಡಾ. ಪ್ರಕಾಶ ಗರುಡ, ಇತರರು ಇದ್ದರು.