ಜಿಲ್ಲೆ

ಗುಲಾಬಿ ಚಳವಳಿಗೆ ಮೊದಲ ಯಶ, 44 ಮಂದಿ ತಂಬಾಕು ವ್ಯಸನದಿಂದ ಮುಕ್ತ, 1,156 ಮಂದಿ ಚಿಕಿತ್ಸೆಗೆ ನೋಂದಣಿ

Bengaluru Rural

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ತಂಬಾಕು ವ್ಯಸನಿಗಳನ್ನು ವ್ಯಸನಮುಕ್ತಗೊಳಿಸಲು ಆರಂಭಿಸಿರುವ ಗುಲಾಬಿ ಚಳವಳಿ (ರೋಸ್‌ಕ್ಯಾಂಪೆನ್)ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ವರ್ಷದಿಂದ 44 ಮಂದಿ ವ್ಯಸನಿದಿಂದ ಮುಕ್ತರಾಗಿದ್ದಾರೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕ ತಿಳಿಸಿದೆ.

ತಂಬಾಕು ನಿಯಂತ್ರಣ ಘಟಕದಿಂದ ಆರಂಭಿಸಲಾದ ಗುಲಾಬಿ ಚಳವಳಿಯಲ್ಲಿ ತಂಬಾಕು ಸೇವನೆ ದುಷ್ಪರಿಣಾಮ, ನಿಯಂತ್ರಣದ ಕುರಿತು ಅರಿವು ಮೂಡಿಸಲಾಗುತ್ತಿದೆ. ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ 1,156 ಮಂದಿ ವ್ಯವಸದಿಂದಮುಕ್ತರಾಗಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದು, ಚಿಕಿತ್ಸೆಗೆ ನೋಂದಣಿಯಾಗಿದ್ದಾರೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರ್ತಿ ಡಾ.ವಿದ್ಯಾರಾಣಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ತಂಬಾಕು ಉತ್ಪನ್ನ ನಿಯಂತ್ರಣ, ಸಾರ್ವಜನಿಕ ಸ್ಥಳಗಳಲ್ಲಿ ಸೇವನೆ ಹಾಗೂ ನಿಯಮ ಉಲ್ಲಂಸಿ ತಂಬಾಕು ಉತ್ಪನ್ನ ಮಾರಾಟದ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ 520 ಪ್ರಕರಣ ದಾಖಲಿಸಿ, ಒಟ್ಟು 85,200 ರೂ. ದಂಡ ಸಂಗ್ರಹಿಸಲಾಗಿದೆ. ಪುನರಾವರ್ತನೆಯಾದರೆ ಕಾನೂನು ಕ್ರಮದ ಎಚ್ಚರಿಕೆ ರವಾನಿಸಲಾಗಿದೆ ಎಂದು ವಿದ್ಯಾರಾಣಿ ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧ: ಕರೊನಾ ಸೋಂಕು ತೀವ್ರವಾಗುತ್ತಿದೆ. ತಂಬಾಕು ಉತ್ಪನ್ನ ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಕರೊನಾ ಹರಡಲು ಕಾರಣವಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇತ್ತೀಚಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಜಿಲ್ಲಾಧಿಕಾರಿ, ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ನಿಯಮ ಉಲ್ಲಂಘನೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಜಗಿಯುವವರ ವಿರುದ್ಧ ಆರೋಗ್ಯ ಇಲಾಖೆ ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ದಂಡದ ಜತೆಗೆ ಜಾಗೃತಿ ಮೂಡಿಸಬೇಕು. ಕೈಗಾರಿಕಾ ಪ್ರದೇಶ, ಬಸ್‌ನಿಲ್ದಾಣ, ರೈಲು ನಿಲ್ದಾಣ, ಶಾಲಾ-ಕಾಲೇಜು ಆವರಣ ಮತ್ತು ಸರ್ಕಾರಿ ಕಚೇರಿ ಆವರಣಗಳಲ್ಲಿ ನಿಗಾವಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ಆಹಾರ ಭದ್ರತಾ ಕಾಯ್ದೆ ಉಲ್ಲಂಘಿಸುವ ಹೋಟೆಲ್ ಅಂಗಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ 2003ರ ಕೋಟ್ಪಾ ಕಾಯ್ದೆಯಲ್ಲಿ ಜಿಲ್ಲೆಯ ಎಲ್ಲ ಶೈಕ್ಷಣಿಕ ಸಂಸ್ಥೆಗಳ ಆವರಣದಿಂದ 100 ಗಜ ಅಂತರದಲ್ಲಿ ತಂಬಾಕು ಉತ್ಪನ್ನ ಮಾರುವಂತಿಲ್ಲ. ಈ ಬಗ್ಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಬೇಕು ಎಂದು ತಾಕೀತು ಮಾಡಿದ್ದಾರೆ.

ತಂಬಾಕು ಸೇವನೆ ತ್ಯಜಿಸಿ ಒಳ್ಳೆಯ ಅಭ್ಯಾಸ ರೂಢಿಸಿಕೊಳ್ಳಲು ಮನವೊಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಿ.ಎನ್. ರವೀಂದ್ರ, ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ 1156 ಮಂದಿ ವ್ಯವಸಮುಕ್ತರಾಗಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದು, ಚಿಕಿತ್ಸೆಗೆ ನೋಂದಣಿಯಾಗಿದ್ದಾರೆ. ಈಗಾಗಲೇ 44 ಮಂದಿ ವ್ಯಸನದಿಂದ ಸಂಪೂರ್ಣ ಮುಕ್ತರಾಗಿದ್ದಾರೆ. ಗುಲಾಬಿ ಚಳವಳಿಗೆ ಸಿಕ್ಕ ಮೊದಲ ಯಶಸ್ಸು ಎನ್ನಬಹುದು. ಡಾ.ವಿದ್ಯಾರಾಣಿ, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರ್ತಿ