ಜಿಲ್ಲೆ

ಪ್ರಥಮ ಜ್ಯೋತಿರ್ಲಿಂಗ ಗುಜರಾತ್​ನ ಸೌರಾಷ್ಟ್ರದಲ್ಲಿರುವ ಸೋಮನಾಥ

ಪ್ರಶಾಂತ ರಿಪ್ಪನ್‌ಪೇಟೆ, ಬೆಂಗಳೂರು : ‘‘ಸೌರಾಷ್ಟ್ರೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನಮ್, ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್, ಪರ್ಲ್ಯಾಂ ವೈದ್ಯನಾಥಂಚ ಢಾಕಿನ್ಯಾಂ ಭೀಮ ಶಂಕರಮ್,

ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ, ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ, ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ.

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ, ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ.’

ಸಪ್ತ ಜನ್ಮಗಳ ಪಾಪಗಳನ್ನು ನಾಶ ಮಾಡುವ ಶಕ್ತಿ ಇರುವ ದ್ವಾದಶ ಜ್ಯೋತಿರ್ಲಿಂಗಗಳು ಭಾರತದ ಧಾರ್ಮಿಕ ಸಂಸ್ಕೃತಿಯ ಹೆಗ್ಗುರುತುಗಳು. ಜಾತಿ, ಮತ, ಭಾಷೆ, ಪ್ರದೇಶ ಎಂಬ ಎಲ್ಲ ಭೇದಗಳನ್ನು ಬದಿಗೊತ್ತಿ ಸರ್ವರಲ್ಲಿ ಸಾಮರಸ್ಯ ಮತ್ತು ಸಮನ್ವಯವನ್ನು ಸಾಧಿಸುವಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಮಹಾ ಶಿವರಾತ್ರಿಯ ಪರ್ವಕಾಲದಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದಾದ ಸೌರಾಷ್ಟ್ರ ಸೋಮನಾಥನ ಕುರಿತು ಒಂದು ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ.

ಗುಜರಾತ್ ಸೌರಾಷ್ಟ್ರದ ಜುನಾಗಡ ಜಿಲ್ಲೆಯ ಪ್ರಭಾಸ್ ಎಂಬಲ್ಲಿ ಸೋಮನಾಥ ಕ್ಷೇತ್ರವಿದೆ. ಸ್ಥಳಪುರಾಣದ ಪ್ರಕಾರ ಮಹಾದೇವನು ಬ್ರಹ್ಮ, ವಿಷ್ಣುವಿಗೆ ತನ್ನ ಮಹಿಮೆಯನ್ನು ತೋರುವುದಕ್ಕಾಗಿ ಜ್ಯೋತಿ ಸ್ವರೂಪದ ಸ್ತಂಭಗಳನ್ನು ಸೃಷ್ಟಿಸಿದ್ದು, ಅದೇ ಜ್ಯೋತಿರ್ಲಿಂಗ ಕ್ಷೇತ್ರವಾಗಿದೆ.

ಭಾರತದ ಪಶ್ಚಿಮದ ಅಂಚಿನಲ್ಲಿರುವ ಅರಬ್ಬಿ ಸಮುದ್ರದ ದಂಡೆಯಲ್ಲಿ ಸೋಮನಾಥ ಜ್ಯೋತಿರ್ಲಿಂಗವಿದ್ದು, ಹಲವಾರು ಬಾರಿ ಪರಕೀಯರ ದಾಳಿಗೆ ಒಳಗಾಗಿ ಮತ್ತೆ ಜೀರ್ಣೋದ್ಧಾರಗೊಂಡಿದೆ. ಹಿಂದೂ ರಾಜಮನೆತನಗಳಾದ ಪೇಶ್ವೆ, ಬೋಸ್ಲೆ, ಛತ್ರಪತಿ ಹಾಗೂ ಹೋಲ್ಕರ್ ವಂಶಸ್ಥರು ಈ ದೇವಾಲಯವನ್ನು ಆಯಾ ಕಾಲಕ್ಕೆ ಜೀರ್ಣೋದ್ಧಾರ ಮಾಡಿದ್ದು, ಕೊನೆಯದಾಗಿ ಜುನಾಗಡದ ನವಾಬರಿಂದ ಹೀನಾಯಸ್ಥಿತಿ ತಲುಪಿದ್ದ ದೇವಾಲಯವನ್ನು ಸ್ವಾತಂತ್ರ್ಯನಂತರ ಭಾರತದ ಪ್ರಥಮ ಉಪಪ್ರಧಾನಿ ಸರದಾರ್ ವಲ್ಲಭ ಬಾಯ್ ಪಟೇಲರು ವಿಶಾಲವಾಗಿ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದರು. ಆದರೆ ಅವರ ಮರಣಾನಂತರ 1951ರಲ್ಲಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಉದ್ಘಾಟಿಸಿದರು. ಮಹಾಶಿವರಾತ್ರಿಯಲ್ಲಿ ಬೃಹತ್ ಜಾತ್ರೆ ನಡೆಯಲಿದ್ದು, ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಸೋಮನಾಥದಲ್ಲಿ ರೈಲ್ವೇ ನಿಲ್ದಾಣ ಹಾಗೂ ಹತ್ತಿರದ ದಿಯೂ ಮತ್ತು ಕೆಶೂದ್‌ನಲ್ಲಿ ವಿಮಾನ ನಿಲ್ದಾಣಗಳಿವೆ.