ಜಿಲ್ಲೆ

ಅಗ್ನಿಶಾಮಕ ದಳಕ್ಕೆ ವಾಹನವೇ ಇಲ್ಲ : ಬೆಳ್ತಂಗಡಿಯಲ್ಲಿ ಎಫ್‌ಸಿ ಮುಗಿದು ಮೂಲೆಗುಂಪು : ಅವಘಡ ಸಂದರ್ಭದಲ್ಲಿ ಅಸಹಾಯಕ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಬೆಳ್ತಂಗಡಿ ಅಗ್ನಿಶಾಮಕ ದಳಕ್ಕೆ ವಾಹನ ಇಲ್ಲದ ಕಾರಣ ಬೆಂಕಿ ಅವಘಡಗಳು ಉಂಟಾದರೆ ಮುಂದಿನ ವ್ಯವಸ್ಥೆ ಏನು? ಎಂಬ ಪ್ರಶ್ನೆ ಮೂಡಿದೆ.

ಬೆಳ್ತಂಗಡಿ ಅಗ್ನಿಶಾಮಕ ದಳದಲ್ಲಿ ಎರಡು ಅಗ್ನಿಶಾಮಕ ವಾಹನಗಳು ಇದ್ದವು. ಒಂದು ವಾಹನ ಒಂದೂವರೆ ವರ್ಷದ ಹಿಂದೆ 15 ವರ್ಷಗಳನ್ನು ಪೂರೈಸಿದ ಕಾರಣ ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದೆ ಮೂಲೆಗುಂಪಾಗಿದೆ. ಇದರ ಬಳಿಕ ಒಂದೇ ವಾಹನದ ಇತ್ತು. ಈ ವಾಹನ ಮಾ.2ರಂದು 15 ವರ್ಷ ಪೂರೈಸಿದ ಕಾರಣ ಇನ್ನು ರಸ್ತೆಗೆ ಇಳಿಯುವಂತಿಲ್ಲ. ಈ ಕಾರಣದಿಂದ ತಾಲೂಕಿನಲ್ಲಿ ಅಗ್ನಿಶಾಮಕ ಸೇವೆಗೆ ಸಿಗುವುದಿಲ್ಲ. ಠಾಣೆಯಲ್ಲಿ ಉಳಿದ ಸೌಲಭ್ಯಗಳಿದ್ದರೂ ಅಗತ್ಯ ವಾಹನವೇ ಇಲ್ಲದ ಕಾರಣ ಇದು ಅಗತ್ಯಕ್ಕೆ ಒದಗದ ಸೌಲಭ್ಯವಾಗಿದೆ.

ತಾಲೂಕಿನಲ್ಲಿ ಬೆಂಕಿ ಅವಘಡಗಳು ಉಂಟಾದ ಸಂದರ್ಭ ಪಕ್ಕದ ಪುತ್ತೂರು, ಬಂಟ್ವಾಳ, ಮೂಡುಬಿದಿರೆಯಿಂದ ಅಗ್ನಿಶಾಮಕ ವಾಹನ ತರಿಸುವ ಅನಿವಾರ್ಯತೆ ಎದುರಾಗಿದೆ. ಅಲ್ಲಿಯೂ ಒಂದೊಂದೇ ವಾಹನ ಇರುವ ಕಾರಣ ತ್ವರಿತ ಸೇವೆ ಸಿಗುವುದು ಕಷ್ಟ. ಇದರಿಂದ ತಾಲೂಕಿನಲ್ಲಿ ಅಗ್ನಿ ಅವಘಡಗಳು ಉಂಟಾದರೆ ಯಾರನ್ನು ಅವಲಂಬಿಸಬೇಕು? ಎಂಬುದು ಉತ್ತರವಿಲ್ಲದ ಪ್ರಶ್ನೆಯಾಗಿದೆ.

ಬೆಂಕಿ ಅವಘಡಗಳು ಅಧಿಕ: ಬೇರೆ ತಾಲೂಕುಗಳಿಗೆ ಹೋಲಿಸಿದರೆ ಬೆಳ್ತಂಗಡಿ ತಾಲೂಕು ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿದೆ. ಇಲ್ಲಿ ಅರಣ್ಯ ವಲಯವಲ್ಲದೆ ವನ್ಯಜೀವಿ ವಿಭಾಗವೂ ಇದೆ. ಸಾಕಷ್ಟು ಕೃಷಿ ಭೂಮಿ ಇದೆ. ಹೆಚ್ಚಿನ ವಿದ್ಯುತ್ ಲೈನ್ ಅರಣ್ಯದ ಮೂಲಕವೇ ಹಾದುಹೋಗಿದೆ. ಆಗಾಗ ನಾನಾ ಕಾರಣಗಳಿಂದ ಬೆಂಕಿ ಅವಘಡಗಳು ಸಂಭವಿಸುತ್ತವೆ. ಈಗಾಗಲೇ ಬೇಸಿಗೆಯ ಬಿರು ಬಿಸಿಲಿನ ದಿನಗಳು ಕಾಲಿರಿಸಿದ್ದು ಇಷ್ಟರೊಳಗೆ ಅನೇಕ ಬೆಂಕಿ ಪ್ರಕರಣಗಳು ಉಂಟಾಗಿವೆ. ಮುಂದಿನ ದಿನಗಳು ಇನ್ನಷ್ಟು ಅಪಾಯಕಾರಿಯಾಗಿದು,್ದ ಬೆಂಕಿ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ. ಮಾ.3ರಂದು ಅಗ್ನಿಶಾಮಕ ದಳಕ್ಕೆ ಬೆಂಕಿ ಪ್ರಕರಣಗಳ ಕುರಿತು ದೂರುಗಳು ಬಂದಿದ್ದರೂ ವ್ಯವಸ್ಥೆ ಇಲ್ಲದ ಕಾರಣ ಬೆಂಕಿ ಹತೋಟಿಗೆ ತರಲು ಹರಸಾಹಸ ನಡೆಸುವ ಸ್ಥಿತಿ ಉಂಟಾಯಿತು.

ತಾಲೂಕಿನಲ್ಲಿ ಅಗ್ನಿಶಾಮಕ ದಳಕ್ಕೆ ವಾಹನ ಇಲ್ಲದ ಕಾರಣ ಬೆಂಕಿ ಹತೋಟಿಗೆ ತರಲು ಸಾರ್ವಜನಿಕರೆ ವ್ಯವಸ್ಥೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಬೆಳ್ತಂಗಡಿ ತಾಲೂಕಿಗೆ ಮೂರು ಅಗ್ನಿಶಾಮಕ ವಾಹನಗಳ ಅಗತ್ಯವಿದೆ. ಆದರೆ ಈಗ ಒಂದು ವಾಹನದ ವ್ಯವಸ್ಥೆಯೂ ಇಲ್ಲ.

ಇನ್ನೂ ಆರಂಭವಾಗದ ಖರೀದಿ ಪ್ರಕ್ರಿಯೆ

ಅಗ್ನಿಶಾಮಕ ವಾಹನದ ಕುರಿತು ಜನಪ್ರತಿನಿಧಿಗಳು, ಇಲಾಖೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ವ್ಯವಸ್ಥೆಯಾಗಿಲ್ಲ. ಜಿಲ್ಲೆಯಲ್ಲಿ 7 ಅಗ್ನಿಶಾಮಕ ಠಾಣೆಗಳಲ್ಲಿ ಕೇವಲ 6 ವಾಹನಗಳು ಮಾತ್ರ ಇವೆ ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳದ ಅಗತ್ಯ ವಾಹನವನ್ನು ನಿರ್ಮಿಸಲು ಕನಿಷ್ಠ ಆರು ತಿಂಗಳು ಸಮಯ ಬೇಕಾಗುತ್ತದೆ. ಆದರೆ ಇದುವರೆಗೂ ವಾಹನ ಖರೀದಿ ಬಗ್ಗೆ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಈ ಕಾರಣದಿಂದ ಮುಂದಿನ ಅನೇಕ ಸಮಯ ಬೆಳ್ತಂಗಡಿಯಲ್ಲಿ ಅಗ್ನಿಶಾಮಕದಳಕ್ಕೆ ವಾಹನ ವ್ಯವಸ್ಥೆ ಸಿಗುವುದು ಅನುಮಾನ.

ಖಾಸಗಿ ಟ್ಯಾಂಕರ್ ಮೊರೆ

ಖಾಸಗಿ ಟ್ಯಾಂಕರ್‌ಗಳನ್ನು ಬಳಸಬಹುದಾಗಿದ್ದರೂ ಸುಸಜ್ಜಿತ ಅಗ್ನಿಶಾಮಕದಂತೆ ವ್ಯವಸ್ಥೆ ಇಲ್ಲದಿರುವುದಿಂದ ಅದೂ ಪ್ರಯೋಜನಕ್ಕಿಲ್ಲ. ಖಾಲಿ ನೀರು ಹಾಕಿ ಅಗ್ನಿ ನಂದಿಸಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಇನ್ನೂ ಮನವರಿಕೆ ಆಗಿಲ್ಲ.

ಅಗ್ನಿಶಾಮಕ ಠಾಣೆಗಳಿಗೆ ಅಗತ್ಯ ವಾಹನಗಳನ್ನು ಒದಗಿಸುವಂತೆ ಸಂಬಂಧಪಟ್ಟವರಿಗೆ ಅನೇಕ ಬಾರಿ ಮನವಿ ಮಾಡಲಾಗಿದೆ. ಭರತ್ ಕುಮಾರ್ ಅಧಿಕಾರಿ, ಅಗ್ನಿಶಾಮಕ ದಳ ದ.ಕ. https://www.vijayavani.net/kisan-meeting https://www.vijayavani.net/lunch-plate-donation-to-mulinja-school