ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಬಲಿದಾನ ದಿವಸ ಆಚರಿಸಲಾಯಿತು. ಸಂತೋಷ ಬಂಡೆ, ಮಂಜುನಾಥ ಗಂಗನಳ್ಳಿ, ಸುರೇಶ ಕತ್ನಳ್ಳಿ ಮತ್ತಿತರರಿದ್ದಾರೆ. 
ಜಿಲ್ಲೆ

ಹೋರಾಟಗಾರರ ಧ್ಯೇಯ ಸ್ಮರಣೀಯ

ದತ್ತಾತ್ರೇಯ ಪಿ ಕುಲಕರ್ಣಿ

ವಿಜಯಪುರ : ಸ್ವಾತಂತ್ರೃಕ್ಕಾಗಿ ಪ್ರಾಣವನ್ನೆ ಮುಡಿಪಾಗಿರಿಸಿದ ಭಗತ್‌ಸಿಂಗ್, ಸುಖದೇವ ಮತ್ತು ರಾಜಗುರು ಅವರ ಪರಾಕ್ರಮ, ಧೈರ್ಯ, ತ್ಯಾಗ, ಹೋರಾಟ ಹಾಗೂ ಆದರ್ಶಗಳು ಯುವಜನತೆಗೆ ಸದಾ ಸ್ಮರಣೀಯ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.

ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಲಿದಾನ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತವನ್ನು ಬ್ರಿಟಿಷರ ಸಂಕೋಲೆಯಿಂದ ಸ್ವತಂತ್ರಗೊಳಿಸಲು ಧೈರ್ಯ-ವೀರಾವೇಶದಿಂದ ಹೋರಾಡಿ ದೇಶಕ್ಕಾಗಿ ಪ್ರಾಣವನ್ನೇ ಸಮರ್ಪಿಸಿದ ಕ್ರಾಂತಿಕಾರಿ ಭಗತ್‌ಸಿಂಗ್, ರಾಜಗುರು ಹಾಗೂ ಸುಖದೇವ ಅವರು ಶ್ರೇಷ್ಠ ದೇಶಪ್ರೇಮಿಗಳು. ಅವರ ತತ್ವಾದರ್ಶ ಇಂದಿನ ಮಕ್ಕಳಿಗೆ ದಾರಿದೀಪವಾಗಬೇಕು ಎಂದು ಹೇಳಿದರು.

ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, ದೇಶದ ಸ್ವಾತಂತ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹೋರಾಟಗಾರರ ಬಲಿದಾನ ಸ್ಮರಿಸಿ ಗೌರವ ಸಲ್ಲಿಸಬೇಕು. ಮಕ್ಕಳು ರಾಷ್ಟ್ರಪ್ರೇಮ ಬೆಳೆಸಿಕೊಳ್ಳುವ ಜತೆಗೆ ಸ್ವಾತಂತ್ರೃ ಹೋರಾಟಗಾರರ ಸಾಧನೆ ಕುರಿತ ಇತಿಹಾಸ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಮದ ಸುರೇಶ ಕತ್ನಳ್ಳಿ, ಬಸವರಾಜ ಸಾರವಾಡ, ಆನಂದ ಗಂಗನಳ್ಳಿ ಮತ್ತಿತರರಿದ್ದರು.