ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಹಾಗೂ ವರ್ತಕರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟಕ್ಕೆ ಡಿಎಸ್ಎಸ್, ಆಟೋ ಚಾಲಕರು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೆಂಬಲ ಸೂಚಿಸಿದರು.
ಡಿಎಸ್ಎಸ್ ಪರಿವರ್ತನಾ ವಾದ ಸಂಘಟನೆ ತಾಲೂಕಾಧ್ಯಕ್ಷ ಚಂದ್ರಶೇಖರ ಗದಗಕರ್ ಮಾತನಾಡಿ, ಅಂತಾರಾಷ್ಟ್ರೀಯ ಖ್ಯಾತಿಯ ಪಟ್ಟಣಕ್ಕೆ ಬಂದು ಹೋಗಲು ಗುಣಮಟ್ಟದ ರಸ್ತೆಯಿಲ್ಲ. ವಾಹನ ಚಾಲಕರು ಸಾರ್ವಜನಿಕರು ನಿತ್ಯ ಪರದಾಡುತ್ತಿದ್ದಾರೆ. ಆಸ್ತಿ ಮಾಲೀಕರು ರಸ್ತೆ ವಿಸ್ತರಣೆ ಕಾಮಗಾರಿಗೆ ತಡೆಯೊಡ್ಡುವುದು ಸರಿಯಲ್ಲ. ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಸಾರ್ವಜನಿಕರ ಹಿತಾಸಕ್ತಿಗೆ ಸಹಕರಿಸಬೇಕು. ನ್ಯಾಯ ಸಿಗುವವರೆಗೂ ಹೋರಾಟಕ್ಕೆ ಬೆಂಬಲಿಸುವುದಾಗಿ ತಿಳಿಸಿದರು.
ಲೋಕೋಪಯೋಗಿ, ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮುಖ್ಯ ರಸ್ತೆ ಕಾಮಗಾರಿ ಸಾಕಷ್ಟು ವಿಳಂಬವಾಗಿದೆ. ಕೆಲ ಆಸ್ತಿ ಮಾಲೀಕರು ನ್ಯಾಯಾಲಯಕ್ಕೆ ತೆರಳಿದ್ದಾರೆ ಎನ್ನುವ ನೆಪ ಹೇಳುವ ಅಧಿಕಾರಿಗಳು, ಕಾನೂನಾತ್ಮಕವಾಗಿ ಏನು ಕ್ರಮ ಕೈಗೊಂಡಿದ್ದೀರಿ? 15 ವರ್ಷಗಳ ಕಾಲ ಏಕೆ ರಸ್ತೆ ವಿಸ್ತರಣೆ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ರಸ್ತೆ ಕಾಮಗಾರಿಗೆ ಆದೇಶ ಹೊರ ಬೀಳುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ವರ್ತಕರ ಸಂಘದ ಕಾರ್ಯದರ್ಶಿ ರಾಜು ಮೋರಗೇರಿ, ಸದಸ್ಯರಾದ ಬಸವರಾಜ ಛತ್ರದ, ಗಂಗಣ್ಣ ಎಲಿ, ಸುರೇಶ ಚಲವಾದಿ, ಗಣೇಶ ಅಚಲಕರ, ಕಿರಣ ಎಂ.ಎಲ್. ಪ್ರಶಾಂತ ಯಾದವಾಡ, ವಿನಾಯಕ ಕಂಬಳಿ, ಪಾಂಡು ಸುತಾರ, ಪ್ರವೀಣ ಶಿಲ್ಪಿ, ಗುತ್ತೆಮ್ಮ ಮಾಳಗಿ, ರವಿ ಮಾಳಗಿ ಇತರರಿದ್ದರು.