ಅವಿನಾಶ್ ಜೈನಹಳ್ಳಿ ಮೈಸೂರು
ಎಚ್1 ಎನ್1 ಮಹಾಮಾರಿ ಎಂದು ಕರೆಯಲ್ಪಡುವ ಹಂದಿಜ್ವರ (ಆಫ್ರಿಕನ್ ಸೈನ್ ಫೀವರ್) ಮತ್ತೆ ನೆರೆಯ ಕೇರಳದಲ್ಲಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ.
ಜಿಲ್ಲೆಯೊಂದಿಗೆ ಗಡಿ ಹೊಂದಿರುವ ಪಕ್ಕದ ಕೇರಳ ರಾಜ್ಯದಲ್ಲಿ ಯಾವುದೇ ಸಾಂಕ್ರಾಮಿಕ ಕಂಡುಬಂದರೂ ಅದು ಜಿಲ್ಲೆಯ ಮೇಲೆ ಪರಿಣಾಮ ಬೀರದಂತೆ ಹಾಗೂ ವ್ಯಾಪಿಸದಂತೆ ಸದಾ ಕಟ್ಟೆಚ್ಚರ ವಹಿಸಲಾಗುತ್ತದೆ.
ಇದೀಗ ಕೇರಳದಲ್ಲಿ ಹಂದಿಜ್ವರ ಮತ್ತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಿವೆ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಆರೋಗ್ಯ ಇಲಾಖೆ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಮುಖ್ಯವಾಗಿ ಆ ತಂಡ ಜಿಲ್ಲೆಯ ಗಡಿ ಭಾಗವಾಗಿರುವ ಎಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಬಿಗಿ ತಪಾಸಣೆ ನಡೆಸುತ್ತಿದೆ. 2 ತಂಡಗಳನ್ನು ರಚನೆ ಮಾಡಲಾಗಿದೆ.
ಒಂದು ತಂಡ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ, ಇನ್ನೊಂದು ತಂಡ ಮಧ್ಯಾಹ್ನ 2ರಿಂದ ಸಂಜೆ 6 ಗಂಟೆ ತನಕ ಕರ್ತವ್ಯ ನಿರ್ವಹಿಸುತ್ತಿದೆ. ಕೇರಳದಿಂದ ಪ್ರಾಣಿಗಳ ಸಾಗಣೆ, ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ, ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಈಗಾಗಲೇ ಕೇರಳದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಡಿ.ಬಿ. ಕುಪ್ಪೆ ಮತ್ತು ಬಾವಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತಿದೆ. ಯಾವುದೇ ತರಹದ ಜ್ವರ ಕಾಣಿಸಿಕೊಂಡರೂ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.
ಹಂದಿಜ್ವರ ಸೋಂಕಿನ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ. ಎಚ್1 ಎನ್1ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಎಚ್ಚರಿಕೆ ವಹಿಸುವಂತೆ ಜಿಲ್ಲೆಯ ಜನರಿಗೆ ಈಗಾಗಲೇ ಮಾಹಿತಿ ನೀಡುತ್ತಿದ್ದು, ಸಾಮಾನ್ಯ ಜ್ವರ, ನೆಗಡಿ ಬಂದರೂ ವೈದ್ಯರ ಬಳಿ ತೋರಿಸುವಂತೆ ಸಲಹೆ ನೀಡಲಾಗಿದೆ.
ಏಕಾಏಕಿ ತಲೆನೋವು, ದೇಹದ ಒಂದೊಂದು ಅಂಗವೂ ನೋವಿನಿಂದ ಕಿರುಗುಟ್ಟುವುದು, ಮೂಗು ಸೋರಿಕೆ, ಅತೀವ ಜ್ವರ, ಶೀತ, ಸತತ ಕೆಮ್ಮು, ಸುಸ್ತು, ಗಂಟಲು ನೋವು, ಕಫ ಕಟ್ಟಿರುವ ಗಂಟಲು… ಇವು ಹಂದಿಜ್ವರ ಪ್ರಮುಖ ಲಕ್ಷಣಗಳಾಗಿವೆ.
ಇದೊಂದು ಸಾಂಕ್ರಾಮಿಕ ಹಾಗೂ ಶ್ವಾಸಕೋಶಕ್ಕೆ ಸಂಬಂಧಪಟ್ಟ ರೋಗವಾಗಿದ್ದು, ಈ ಸೋಂಕಿನಿಂದ ಬಳಲುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಬೇರೆಯವರಿಗೆ ರೋಗ ಹರಡುವ ಸಾಧ್ಯತೆ ಇದೆ.
ಸೀನುವಾಗ ಅಥವಾ ಕೆಮ್ಮುವಾಗ ಕರವಸ್ತ್ರದಿಂದ ಬಾಯನ್ನು ಮುಚ್ಚಿಕೊಳ್ಳುವುದು, ಊಟದ ಮೊದಲು ಸಾಬೂನಿನಿಂದ ಕೈ ತೊಳೆದುಕೊಳ್ಳುವುದು ಮಾಡಬೇಕು. ಜನಸಂದಣಿ ಇರುವ ಕಡೆ ಹೋಗುವುದನ್ನು ತಡೆಗಟ್ಟಬೇಕು. ಚೆನ್ನಾಗಿ ನಿದ್ದೆ ಮಾಡುವುದು, ಹೆಚ್ಚು ನೀರು ಕುಡಿಯುವುದು, ಒಂದು ವಾರಕ್ಕಿಂತ ಹೆಚ್ಚು ದಿನಗಳ ಕಾಲ ಜ್ವರ, ಕೆಮ್ಮು, ಶೀತ ಇದ್ದರೆ ಹತ್ತಿರದ ವೈದ್ಯರಲ್ಲಿ ತೋರಿಸುವುದು ಅಗತ್ಯ. ಈ ವೈರಸ್ ಪೀಡಿತ ಹಂದಿ ಮಾಂಸವನ್ನು ಸರಿಯಾಗಿ ಸ್ವಚ್ಛಗೊಳಿಸದೆ ಅಥವಾ ಹದವಾಗಿ ಬೇಯಿಸದೆ ತಿಂದರೆ ರೋಗ ಹರಡುವ ಸಂಭವವಿರುತ್ತದೆ. ರೋಗಾಣು ಬೆರೆತ ನೀರು, ಮಾಂಸ, ಸೇವಿಸುವುದರಿಂದ ಸೋಂಕು ಹರಡಬಹುದು. ಮೂಗಿಗೆ ಸದಾ ಬಟ್ಟೆ ಕಟ್ಟಿಕೊಳ್ಳುವುದರಿಂದ ಕೆಲ ಪ್ರಮಾಣದಲ್ಲಿ ರೋಗ ಹರಡುವುದನ್ನು ತಡೆಯಬಹುದು. ಹಂದಿಜ್ವರ ಪೀಡಿತ ವ್ಯಕ್ತಿಯ ಜೊಲ್ಲು, ಸೀನಿನ ಮೂಲಕ ಸಿಡಿದ ದ್ರವ, ಆಹಾರ ವಸ್ತುಗಳಿಗೆ ಸೇರಿದರೆ ಸೋಂಕು ತಗಲುವ ಸಾಧ್ಯತೆಯಿದೆ.
ಹಂದಿಜ್ವರ ಮತ್ತೆ ನೆರೆಯ ಕೇರಳದಲ್ಲಿ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಎಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಆರೋಗ್ಯ ಇಲಾಖೆ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಜ್ವರ ಸಂಬಂಧ ಸಾರ್ವಜನಿಕರಿಗೂ ಅರಿವು ಮೂಡಿಸಲಾಗುತ್ತಿದೆ.ಡಾ.ಪಿ.ಸಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ