ಮಹಾಲಿಂಗಪುರ: ಪಟ್ಟಣಕ್ಕೆ ಮೊಸರು ಮಾರಲು ಬಂದಿದ್ದ ಅಜ್ಜಿಯೊಬ್ಬಳು ಕಳೆದುಕೊಂಡಿದ್ದ ಒಂದು ತೊಲ ಬಂಗಾರದ ಬೋರಮಾಳನ್ನು ರೈತನೊಬ್ಬ ಪ್ರಾಮಾಣಿಕವಾಗಿ ಮರಳಿಸಿ ಮಾನವೀಯತೆ ಮೆರೆದಿದ್ದಾರೆ.
ಸಂಗಾನಟ್ಟಿ ಗ್ರಾಮದ ಬಾಗವ್ವ ಸೈದಾಪುರ ಬಂಗಾರದ ಆಭರಣ ಕಳೆದುಕೊಂಡಿದ್ದ ಅಜ್ಜಿ. ಪಟ್ಟಣದ ಮಹಾಲಿಂಗಪ್ಪ ಇಂಗಳಗಿ ಬಂಗಾರ ಹಿಂದಿರುಗಿಸಿದ ಪ್ರಾಮಾಣಿಕ ರೈತ.
ಸಂಗಾನಟ್ಟಿಯಿಂದ ಅಜ್ಜಿಯು ಮೊಸರು ಮಾರಲು ಪಟ್ಟಣಕ್ಕೆ ಆಗಮಿಸಿದ್ದರು. ಮೊಸರು ಮಾರುತ್ತ ನಡುಚೌಕಿ ಬಳಿ ತನ್ನ ಕೊರಳಲ್ಲಿನ ಒಂದು ತೊಲ ಬಂಗಾರದ ಬೋರಮಾಳ ಕಳೆದುಕೊಂಡಿದ್ದರು. ಕೂಡಲೇ ಅಲ್ಲೆಲ್ಲ ಹುಡುಕಿದರೂ ಸಿಗಲಿಲ್ಲ. ಅದೇ ದಾರಿಯಲ್ಲಿ ಹೋಗುತ್ತಿದ್ದ ರೈತನಿಗೆ ನಡುಚೌಕಿ ಬಳಿ ಬಂಗಾರದ ಬೋರಮಾಳ ಸಿಕ್ಕಿದೆ. ಅದರ ವಾರಸುದಾರರನ್ನು ಹುಡುಕುತ್ತ ಅಲ್ಲಿದ್ದ ತೆಂಗಿನ ಕಾಯಿ ವ್ಯಾಪಾರಸ್ಥರ ಬಳಿ ವಿಚಾರಿಸಿದ್ದು, ಅವರ ಮಾಹಿತಿಯಂತೆ ಶ್ರೀ ಬನಶಂಕರಿ ದೇವಸ್ಥಾನ ಬಳಿ ಅಜ್ಜಿ ಇರುವುದು ಗೊತ್ತಾಗಿದೆ. ಕೂಡಲೇ ಅಲ್ಲಿಗೆ ಹೋಗಿ ಅಜ್ಜಿಗೆ ಬಂಗಾರದ ಬೋರಮಾಳ ಹಿಂದುರುಗಿಸಿದ್ದು, ತನ್ನ ಬೋರಮಾಳ ಸಿಕ್ಕ ಸಂತಸದಲ್ಲಿ ಅಜ್ಜಿ ಕಣ್ಣೀರು ಹಾಕಿದ್ದಾಳೆ. ರೈತನ ಪ್ರಾಮಾಣಿಕತೆ ಕಂಡು ಅಜ್ಜಿ ಸ್ವ ಇಚ್ಛೆಯಿಂದ ಹಣ ನೀಡಲು ಮುಂದಾದರೂ ರೈತ ನಿರಾಕರಿಸಿ, ಇನ್ನು ಮುಂದೆ ಇಂಥ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಮಾರುಕಟ್ಟೆಯಲ್ಲಿ ಹಾಕಿಕೊಂಡು ತಿರುಗಾಡಬಾರದೆಂದು ಬುದ್ಧಿ ಹೇಳಿ ಕಳುಹಿಸಿದ್ದಾರೆ.
ಈ ಕುರಿತು ‘ವಿಜಯವಾಣಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಭರತ ಕದ್ದಿಮನಿ ಅವರು ರೈತ ಮಹಾಲಿಂಗಪ್ಪ ಇಂಗಳಗಿ ಅವರ ಪ್ರಾಮಾಣಿಕ ಕಾರ್ಯ ಶ್ಲಾಘನೀಯವಾಗಿದ್ದಲ್ಲದೆ, ಇತರರಿಗೂ ಅನುಕರಣೀಯ ಎಂದು ತಿಳಿಸಿದ್ದಾರೆ.