ಜಿಲ್ಲೆ

ಚಿಕಿತ್ಸೆಗೆ ಸ್ಪಂದಿಸದೇ ರೈತ ಸಾವು

ವೀರೇಶ ಸೌದ್ರಿ

ಸವಣೂರ: ಸಾಲ ಮರುಪಾವತಿಸುವಂತೆ ಬ್ಯಾಂಕ್ ಹಾಗೂ ಕೋರ್ಟ್‌ನಿಂದ ನೋಟಿಸ್ ಬಂದಿದ್ದರಿಂದ ಮನನೊಂದು ವಿಷ ಕುಡಿದು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರೈತ ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಮೃತಪಟ್ಟಿದ್ದಾರೆ.

ತಾಲೂಕಿನ ಕಳಸೂರ ಗ್ರಾಮದ ಅಜೀತಕುಮಾರ ಅನಂತಪ್ಪ ಬನ್ನಿಕೊಪ್ಪ (76) ಮೃತಪಟ್ಟ ರೈತ. 5 ಎಕರೆ 20 ಗುಂಟೆ ಜಮೀನು ಹೊಂದಿರುವ ಅಜೀತಕುಮಾರ, ಕೃಷಿ ಚಟುವಟಿಕೆಗಾಗಿ ಹಾವೇರಿ ಎಸ್‌ಬಿಐನಲ್ಲಿ ಸಾಲ ತೆಗೆದುಕೊಂಡಿದ್ದ. ಸಾಲ ಮರುಪಾವತಿಸುವಂತೆ ಬ್ಯಾಂಕಿನಿಂದ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೋಟಿಸ್ ಬಂದಿತ್ತು. ಅಲ್ಲದೆ ಹೊಲದಲ್ಲಿ ಬೆಳೆ ಸರಿಯಾಗಿ ಬಾರದಾ ಕಾರಣ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಎಂಬ ಚಿಂತೆಯಲ್ಲಿ ಜು.5ರಂದು ವಿಷ ಸೇವಿಸಿದ್ದ.

ತಕ್ಷಣವೇ ಚಿಕಿತ್ಸೆಗಾಗಿ ಹಾವೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಮೃತಪಟ್ಟಿದ್ದಾರೆ. ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ರೈತನಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ.