ಜಿಲ್ಲೆ

ವಿದ್ಯಾರ್ಥಿಗಳ ಉಚಿತ ಶಿಕ್ಷಣಕ್ಕೆ ಶ್ರಮಪಟ್ಟ ದಿ. ಫಕೀರಪ್ಪ ಹಸಬಿ

ನರಗುಂದ: ಆಧುನಿಕ ನರಗುಂದದ ನಿರ್ವತೃ, ದಾಸೋಹ ಜೀವಿಗಳಾಗಿದ್ದ ದಿ. ಫಕೀರಪ್ಪ ಹಸಬಿ ಅವರು ಸಮಾಜದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ದೊರಕಿಸಲು ಸಾಕಷ್ಟು ಪರಿಶ್ರಮವಹಿಸಿದ್ದಾರೆ ಎಂದು ಪ್ರೊ. ನಿರ್ಮಲಾ ಪಾಟೀಲ ಹೇಳಿದರು.


ಜಗದ್ಗುರು ಶ್ರೀಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 108ನೇ ಜಯಂತ್ಯುತ್ಸವದ ಪ್ರಯುಕ್ತ ಪಟ್ಟಣದ ಶ್ರೀಬಸವೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾವ್ ಬಹದ್ದೂರ್ ಲಿಂ. ಫಕೀರಪ್ಪ ಹಸಬಿ ಅವರ ದತ್ತಿ ಉಪನ್ಯಾಸ ಹಾಗೂ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚನ್ನಬಸಪ್ಪ ಕಂಠಿ ಮಾತನಾಡಿ, ಐತಿಹಾಸಿಕ ಕ್ಷೇತ್ರವಾಗಿರುವ ಸುತ್ತೂರು ಶ್ರೀಮಠದ ಪೂಜ್ಯರು, ಬಡ ಮಕ್ಕಳಿಗೆ ಉಚಿತ ವಸತಿ ಶಿಕ್ಷಣ ನೀಡುವ ಮೂಲಕ ಶಿಕ್ಷಣ ಕ್ರಾಂತಿಯ ಹರಿಕಾರರಾಗಿದ್ದಾರೆ. ಶ್ರೀಗಳು ಹುಟ್ಟು ಹಾಕಿರುವ ಜೆಎಸ್​ಎಸ್ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದ್ದು, ಅವರ ಸೇವಾ ಕಾರ್ಯ ಕ್ಷೇತ್ರ ವಿದೇಶಗಳಲ್ಲಿಯೂ ಮುಂದುವರಿದಿದೆ ಎಂದರು.


ಕದಳಿ ಮಹಿಳಾ ವೇದಿಕೆಯ ನರಗುಂದ ತಾಲೂಕು ಅಧ್ಯಕ್ಷೆ ಲೀಲಕ್ಕ ಹಸಬಿ ಮಾತನಾಡಿದರು. ಜಿಲ್ಲಾ ಕದಳಿ ಮಹಿಳಾ ವೇದಿಕೆ ಸಲಹೆಗಾರ್ತಿ ಸುಕನ್ಯಾ ಸಾಲಿ, ಗಂಗಮ್ಮ ಪಾಟೀಲ, ಬಿ.ಎಚ್. ಕ್ಯಾರಕೊಪ್ಪ, ಆರ್.ಎಚ್. ತಿಗಡಿ, ಮಂಗಳಾ ಪಾಟೀಲ, ಎಂ.ಎಸ್. ಯಾವಗಲ್, ಸಿ.ಎಚ್. ಕೋರಿ, ಶಂಕ್ರಣ್ಣ ವಾಳದ, ಟಿ.ಆರ್. ಉಳ್ಳಾಗಡ್ಡಿ, ಬಸವ ಕೇಂದ್ರದ ಸದಸ್ಯರು ಇದ್ದರು.