ಕಟಕೋಳ: 15 ವರ್ಷಗಳ ನಂತರ 9 ದಿನ ವಿಜೃಂಭಣೆಯಿಂದ ಜರುಗಿದ ಗ್ರಾಮದ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಬುಧವಾರ ವಿದ್ಯುಕ್ತವಾಗಿ ಸಂಪನ್ನಗೊಂಡಿತು. ಮಧ್ಯಾಹ್ನದ ನಂತರ ಶುಭಮುಹೂರ್ತದಲ್ಲಿ ದೇವಿಯರನ್ನು ಸೀಮೆಗೆ ಕಳುಹಿಸುವ ಕಾರ್ಯಕ್ರಮ ಆರಂಭಗೊಂಡಿತು. ಗ್ರಾಮದ ಭಕ್ತರು ಭಂಡಾರದ ಓಕುಳಿಯೊಂದಿಗೆ ಮೆರವಣಿಗೆ ದೃಶ್ಯ ಕಣ್ತುಂಬಿಕೊಂಡು ಭಕ್ತಿಭಾವದೊಂದಿಗೆ ಬಿಳ್ಕೊಟ್ಟರು.
ಗ್ರಾಮದೇವಿ ಆಲಯದ ಮುಂಭಾಗದಲ್ಲಿ ಜಾತ್ರೆಯ ಧಾರ್ಮಿಕ ವಿಧಿ&ವಿಧಾನಗಳು ಸಂಪನ್ನಗೊಂಡವು. ಗ್ರಾಮದ ಪೇಟೆಯಲ್ಲಿ ಅಳವಡಿಸಿದ್ದ ಸಭಾಮಂಟಪದಲ್ಲಿ ನಿತ್ಯ ಸಾಂಸತಿಕ ಕಾರ್ಯಕ್ರಮಗಳು ನಡೆದವು. ಜಾತ್ರೆಯ 9 ದಿನಗಳ ಪೈಕಿ ಪೂರ್ವನಿರ್ಧರಿತ ಎರಡು ದಿನಗಳಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯರ ಹೊನ್ನಾಟ ಸಂಭ್ರಮದಿಂದ ನಡೆಯಿತು. ಹೊನ್ನಾಟದ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ಸಾಗಿ ಗದ್ದುಗೆ ತಲುಪಿದ ಬಳಿಕ ಊರಿನ ಹಕ್ಕುದಾರರ ಸಮ್ಮುಖದಲ್ಲಿ ಗದ್ದುಗೆ ಮೇಲೆ ಪ್ರತಿಷ್ಠಾಪಿಸಲಾಯಿತು.
ದೇವಿಯರ ಮೆರವಣಿಗೆಯಲ್ಲಿ ದೇವಾಲಯದ ಅರ್ಚಕರು, ಊರಿನ ಹಕ್ಕುದಾರರು, ವತನದಾರರು ಮತ್ತು ಹಿರಿಯರು ದೇವಿಯರಿಗೆ ಉಡಿ ತುಂಬಿದರು. ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಭಂಡಾರ ಅರ್ಪಿಸಿ ಸಂಭ್ರಮಿಸಿದರು. ಇಡೀ ಗ್ರಾಮದ ಪ್ರಮುಖ ಬೀದಿಗಳು, ರಸ್ತೆಗಳು, ದೇವಾಲಯಗಳು ಸಂಪೂರ್ಣ ಭಂಡಾರಮಯವಾಗಿ ಕಂಗೊಳಿಸಿದವು. ಶಾಸಕ ಅಶೋಕ ಪಟ್ಟಣ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಸೇರಿ ವಿವಿಧ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ೇತ್ರಗಳ ಮುಖಂಡರು, ದೇವಿಯರ ಅಸಂಖ್ಯಾತ ಭಕ್ತರು ಭಾಗವಹಿಸಿದ್ದರು. ಜಾತ್ರೆಯ ಕೊನೇ ದಿನದಂದು ಕಟಕೋಳ ಹಾಗೂ ಅಕ್ಕಪಕ್ಕದ ಗ್ರಾಮಗಳ ಅಸಂಖ್ಯಾತ ಭಕ್ತರು ಭಕ್ತಿ ಭಂಡಾರದಲ್ಲಿ ಮಿಂದೆದ್ದು ಸಂಭ್ರಮಿಸಿದರು.
4ಕಟಕೋಳ1: ಕಟಕೋಳ ಗ್ರಾಮದೇವಿಯರ ಜಾತ್ರೆಯ ಹೊನ್ನಾಟದ ಮೆರವಣಿಗೆಯಲ್ಲಿ ಭಕ್ತರು ಪಾಲ್ಗೊಂಡಿರುವುದು.