ಜಿಲ್ಲೆ

ಜಾತ್ರೆ ಸಂಸ್ಕೃತಿ, ಪರಂಪರೆಯ ಪ್ರತೀಕ

ಘಟಪ್ರಭಾ: ಸಂಸ್ಕೃತಿ ಹಾಗೂ ಪರಂಪರೆ ಪ್ರತೀಕವಾಗಿರುವ ಗ್ರಾಮದೇವತೆಗಳ ಜಾತ್ರೆ ಹಾಗೂ ಹಬ್ಬಗಳ ಆಚರಣೆಯಿಂದ ಉತ್ತಮ ಮಳೆ, ಬೆಳೆ ಜತೆಗೆ ಸಮೃದ್ಧಿ ಪ್ರಾಪ್ತವಾಗುತ್ತದೆ ಎಂದು ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಹೇಳಿದರು.

ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವದ ಮೂರನೇ ದಿನ ಗುರುವಾರ ಹಮ್ಮಿಕೊಂಡಿದ್ದ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಶಾಸಕ ರಮೇಶ ಜಾರಕಿಹೊಳಿ ಅವರು ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಜಾತ್ರೆಗೆ ಅಗತ್ಯ ಸಹಾಯ, ಸಹಕಾರ ನೀಡಿದ್ದಾರೆ. ಗ್ರಾಮದ ಎಲ್ಲ ಸಮುದಾಯದ ಜನರು ಒಗ್ಗೂಡಿ ಜಾತ್ರೆ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.

ಜಾತ್ರೆ ಕಮಿಟಿ ವತಿಯಿಂದ ಅಂಬಿರಾವ್ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮದ ಹಿರಿಯರು, ಜಾತ್ರೆ ಕಮಿಟಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.