ಜಿಲ್ಲೆ

ಕನ್ನಡಕ್ಕೆ ಸ್ವಂತ ಅಂಕಿ ಸಂಖ್ಯೆಗಳಿರುವುದೇ ಅದರ ಶ್ರೀಮಂತಿಕೆಗೆ ಬಹುದೊಡ್ಡ ಪುರಾವೆ

ಮೈಸೂರು: ಹೆಬ್ಬಾಳು-ವಿಜಯನಗರ ಬಸವ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಶರಣ ಸಂಗಮ ಕಾರ್ಯಕ್ರಮ ಆಯೋಜಿಸಲಾಯಿತು.

ಸಾಹಿತಿ ಜಯಪ್ಪ ಹೊನ್ನಾಳಿ ಮಾತನಾಡಿ, ಶರಣರು ವಚನಗಳ ಮೂಲಕ ಕನ್ನಡವನ್ನು ದೈವ ಭಾಷೆಯಾಗಿಸಿದರು. ಜಾಗತಿಕ ಮಟ್ಟದಲ್ಲಿ ಗೌರವಿಸಲ್ಪಡುವ ವಚನ ಸಾಹಿತ್ಯವನ್ನು ಕನ್ನಡದಲ್ಲೇ ನೀಡಿ ಕನ್ನಡಾಂಬೆಯ ನಿಜವಾದ ನಿತ್ಯೋತ್ಸವಕ್ಕೂ ಕಾರಣರಾದರು ಎಂದು ಹೇಳಿದರು.

ಈಗ ನಾವು ಕನ್ನಡವನ್ನು ದಿನನಿತ್ಯ ಬಳಸುವುದೇ ನಿಜವಾದ ಅರ್ಥದಲ್ಲಿ ಕನ್ನಡದ ನಿತ್ಯೋತ್ಸವವಾಗಲಿದೆ. ಬಳಸಿದರಷ್ಟೇ ಭಾಷೆ ಬೆಳೆಯಲು ಸಾಧ್ಯ. ನಾವು ಕೇವಲ ನವೆಂಬರ್ ಕನ್ನಡಿಗರಾಗದೆ, 12 ತಿಂಗಳೂ ಕನ್ನಡ ಬಳಸಿ ನಂಬರ್ ಒನ್ ಕನ್ನಡಿಗರಾಗಬೇಕಿದೆ ಎಂದರು.

ಸಂಸ್ಕೃತ ಬಿಟ್ಟರೆ ಕನ್ನಡವೇ ಹಿರಿತನದಲ್ಲಿ ಮತ್ತು ಸಿರಿತನದಲ್ಲಿ ಜಾಗತಿಕವಾಗಿ 2ನೇ ಸ್ಥಾನದಲ್ಲಿರುವ ಭಾಷೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ದೊರೆತ್ತಿದೆ. ವೈಜ್ಞಾನಿಕವಾಗಿ ನಮ್ಮ ಹಿರಿಯ ಪ್ರಾಜ್ಞರಿಂದ ಕಟ್ಟಲ್ಪಟ್ಟ ಕನ್ನಡ ಭಾಷೆಗಿರುವಂತೆ ಸ್ವಂತ ಲಿಪಿ ಅಂತಾರಾಷ್ಟ್ರೀಯ ಭಾಷೆಯಾದ ಆಂಗ್ಲ ಭಾಷೆಗೆ ಇಲ್ಲ. ಅದೇ ರೀತಿ ಹಿಂದಿ ಭಾಷೆಗೂ ಇಲ್ಲ. ಆಂಗ್ಲಭಾಷೆಗೆ ರೋಮನ್ ಲಿಪಿಯನ್ನು, ಹಿಂದಿ ಭಾಷೆಗೆ ದೇವನಾಗರಿ ಲಿಪಿಯನ್ನು ಬಳಸಲಾಗುತ್ತದೆ. ಕನ್ನಡಕ್ಕೆ ಸ್ವಂತವಾದ ಅಂಕಿ ಸಂಖ್ಯೆಗಳಿರುವುದೇ ಅದರ ಅತಿ ಶ್ರೀಮಂತಿಕೆಗೆ ಬಹುದೊಡ್ಡ ಪುರಾವೆಯಾಗಿದೆ ಎಂದರು.

ನಮ್ಮಲ್ಲಿ ಮಹಾಕವಿ ಪಂಪ ಬಂದಾಗ ಇಂಗ್ಲಿಷ್ ತೊಟ್ಟಿಲಲ್ಲಿತ್ತು, ಹಿಂದಿ ಹುಟ್ಟಿಯೇ ಇರಲಿಲ್ಲ. ಪಂಪ, ಬಸವಣ್ಣ, ಕುಮಾರವ್ಯಾಸ ಹಾಗೂ ಕುವೆಂಪು ಅವರ ಸಾಹಿತ್ಯ ಇಟ್ಟುಕೊಂಡು ನಾವು ಜಗತ್ತಿನ ನಾಲ್ಕು ದಿಕ್ಕಿನಲ್ಲೂ ಭಾಷಾ ಅಶ್ವಮೇಧ ಮಾಡಿ ಗೆದ್ದು ಬರಬಹುದು, ಹಾಗಿದೆ ನಮ್ಮ ಸಾಹಿತ್ಯ ಸಮೃದ್ಧಿ ಎಂದರು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾರಾಣಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮಂಗಳಾ ಮುದ್ದು ಮಾದಪ್ಪ ಅವರನ್ನು ಸನ್ಮಾನಿಸಲಾಯಿತು. ಬಸವ ಸಮಿತಿ ಅಧ್ಯಕ್ಷ ಎಚ್.ವಿ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು.