ಬೇತಮಂಗಲ: ಚೆನ್ನೆ ಬೆಂಗಳೂರು ಕಾರಿಡಾರ್ ನಿಮಾರ್ಣದ ವೇಳೆ ಸುಮಾರು ಮೂರು ವರ್ಷಗಳವರೆಗೆ ಕೆರೆಗಳಿಂದಟಿಪ್ಪರ್ಗಳ ಮೂಲಕ ಮಣ್ಣು ಸಾಗಿಸಿದ ರಸ್ತೆಗಳು ಹಾಳಾಗಿದ್ದು, ಕೂಡಲೇ ಪುನರ್ ನಿಮಾರ್ಣ ಮಾಡಿಕೊಡಬೇಕೆಂದು ಒತ್ತಾಯಿಸಿ ನೂರಾರು ಸಾರ್ವಜನಿಕರು, ವಾಹನ ಸವಾರರು ಭಾನುವಾರ ರಸ್ತೆ ತಡೆ ನಡೆಸಿದರು.
ಬೇತಮಂಗಲ ಕ್ಯಾಸಂಬಳ್ಳಿ ಮುಖ್ಯರಸ್ತೆಯ ಬ್ಯಾಟರಾಯನಹಳ್ಳಿ ಸಮೀಪ ಎಕ್ಸ್ಪ್ರೆಸ್ ರಸ್ತೆ ಹಾದು ಹೋಗಿದ್ದು, ರಸ್ತೆ ನಿಮಾರ್ಣ ಕಾರ್ಯಕ್ಕೆ ಭಾರೀ ಪ್ರಮಾಣದಲ್ಲಿ ಮಣ್ಣನ್ನು ಉಪಯೋಗಿಸಲಾಗಿತ್ತು. ಪೋತರಾಜನಹಳ್ಳಿ ಮತ್ತು ಬ್ಯಾಟರಾಯನಹಳ್ಳಿ ಕೆರೆಗಳಿಂದ ನಿತ್ಯ ನೂರಾರು ಟಿಪ್ಪರ್ಗಳಲ್ಲಿ ಸಾಗಿಸುತ್ತಿದ್ದರಿಂದ ರಸ್ತೆಗಳು ಹಾನಿಗೊಂಡಿವೆ. ಈ ಭಾಗದ ಮನೆಗಳಿಗೆಲ್ಲ ಮಣ್ಣು ತುಂಬಿಕೊಂಡು ಸಾಕಷ್ಟು ಸಮಸ್ಯೆ ಉಂಟಾಗಿತ್ತು.ಈ ಕುರಿತಂತೆ ಹಲವು ಬಾರಿ ಗ್ರಾಮಸ್ಥರು ಮತ್ತು ಸಂಘ&ಸಂಸ್ಥೆಗಳು ಮಣ್ಣು ಸಾಗಿಸುತ್ತಿದ್ದ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು. ರಸ್ತೆ ನಿಮಾರ್ಣ ಉಸ್ತುವಾರಿ ಮಾಡುತ್ತಿದ್ದ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಹೆದ್ದಾರಿ ನಿಮಾರ್ಣವಾದ ನಂತರ ಪೋತರಾಜನಹಳ್ಳಿಯಿಂದ ಬೇತಮಂಗಲವರೆಗೂ ಎಲ್ಲ ರಸ್ತೆಗಳನ್ನು ನಿಮಾರ್ಣ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು.
ಆದರೆ, ಇದೀಗ ಎಕ್ಸ್ಪ್ರೆಸ್ ನಿಮಾರ್ಣ ಕಾರ್ಯ ಮುಗಿದು ಎರಡು ತಿಂಗಳಾಗಿದ್ದರೂ ಸಹ ಹಾಳಾಗಿರುವ ರಸ್ತೆಗಳನ್ನು ನಿರ್ಮಿಸಲು ಮುಂದಾಗಿಲ್ಲ. ರಸ್ತೆಯಲ್ಲಿ ಹಳ್ಳ, ಗುಂಡಿಗಳು ನಿರ್ಮಾಣವಾಗಿವೆ. ಜನರ ಸಂಚಾರ ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿತ್ಯ ಸಂಚರಿಸುವ, ಆಟೋ, ಟೆಂಪೋ ಚಾಲಕರು ಹಾಗೂ ದ್ವಿಚಕ್ರವಾಹನ ಸವಾರರು ಸಹ ರಸ್ತೆ ತಡೆಗೆ ಬೆಂಬಲಿಸಿ ತಮ್ಮ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಇದರಿಂದಾಗಿ ರಸ್ತೆ ಸಂಪೂರ್ಣ ಬಂದ್ ಆಗಿತ್ತು,
ವಿಷಯ ತಿಳಿದ ಬೇತಮಂಗಲ ಸಬ್ ಇನ್ಸ್ಪೆಕ್ಟರ್ ಗುರುರಾಜ ಚಿಂತಕಲ್ ಮತ್ತು ಸಿಬ್ಬಂದಿ ಪ್ರತಿಭಟನಾಕಾರರ ಮನವೊಲಿಸಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಾವು ಸಹಕರಿಸುವುದಾಗಿ ತಿಳಿಸಿದ್ದರಿಂದ ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ಸತ್ಯಪ್ಪ,ಅಂಬರೀಶ್, ನಾಗರಾಜ್, ವಿಶ್ವ, ಸೋಮಪ್ಪ ಸೇರಿದಂತೆ ನೂರಾರು ಮಂದಿ ಹಾಜರಿದ್ದರು,
ಕಾರಿಡಾರ್ ರಸ್ತೆ ನಿಮಾರ್ಣಕ್ಕೆ ನಮ್ಮ ಹಲವು ಗ್ರಾಮಗಳ ಕೆರೆಗಳಲ್ಲಿ ಅವೈಜ್ಞಾನಿಕವಾಗಿ ಮಣ್ಣು ತೆಗೆದು ಕೆರೆಗಳನ್ನು ನಾಶ ಮಾಡಿದ್ದಾರೆ. ಜತೆಗೆ ಮೂರು ವರ್ಷಗಳವರೆಗೆ ದೊಡ್ಡ ದೊಡ್ಡ ಲಾರಿಗಳಲ್ಲಿ ಮಣ್ಣು ಸಾಗಿಸಿದ್ದರಿಂದ ರಸ್ತೆಗಳು ಸಂಪೂರ್ಣ ನಾಶವಾಗಿವೆ. ಹೆದ್ದಾರಿ ಕಾಮಗಾರಿ ಮುಗಿದ ನಂತರ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ್ದವರು ನಾಪತ್ತೆಯಾಗಿದ್ದಾರೆ. ತಕ್ಷಣ ಹೊಸದಾಗಿ ರಸ್ತೆ ನಿರ್ಮಿಸಿಕೊಡದಿದ್ದಲ್ಲಿ ಹತ್ತಾರು ಗ್ರಾಮಗಳಿಂದ ಸಾವಿರಾರು ಮಂದಿ ಸೇರಿ ಕಾರಿಡಾರ್ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತೇವೆ.
> ವಿಜಯ ಕುಮಾರ್
ಬಿಜೆಪಿ ಮುಖಂಡ, ಬ್ಯಾಟರಾಯನಹಳ್ಳಿ