* ಬಜೆಟ್‌ನಲ್ಲಿ ಜಿಲ್ಲೆಗಿಲ್ಲ ಮಹತ್ವದ ಯೋಜನೆ
* ಮಾತಿಗಷ್ಟೆ ಸೀಮಿತವಾದ ಮೇಕೆದಾಟು
ಗಂಗಾಧರ್ ಬೈರಾಪಟ್ಟಣ ರಾಮನಗರ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತವರು ಜಿಲ್ಲೆ ರಾಮನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಭಾರಿ ಕೊಡುಗೆಯ ನಿರೀಕ್ಷೆ ಹುಸಿಯಾಗಿದೆ. ಡಿ.ಕೆ.ಶಿವಕುಮಾರ್ ಕಾರಣದಿಂದಲೇ ಜಿಲ್ಲೆಗೆ ಸಾಕಷ್ಟು ಯೋಜನೆಗಳು ಹರಿದು ಬರುತ್ತವೆ ಎನ್ನುವ ಲೆಕ್ಕಾಚಾರ ಜನತೆಯಲ್ಲಿ ಇತ್ತು. ಒಂದಷ್ಟು ಮಹತ್ವವಾದ ಯೋಜನೆಗಳು ಘೋಷಣೆಯಾಗಲಿವೆ ಎನ್ನುವ ನಿರೀಕ್ಷೆಯಲ್ಲಿದ್ದ ಜನತೆಗೆ ಸಿದ್ದರಾಮಯ್ಯ ಕೈಗೆ ಬಟ್ಟಲು ಕೊಟ್ಟು, ಅನ್ನ ಹಾಕುವುದನ್ನು ಮರೆತಿದ್ದಾರೆ.
ಮೇಕೆದಾಟು ವಿಚಾರ ರಾಜಕಾರಣಿಗಳ ಪಾಲಿಗೆ ರಾಜಕಾರಣದ ವಸ್ತುವಾಗಿದೆ. ಈ ಬಾರಿಯೂ ಮೇಕೆದಾಟು ವಿಚಾರ ಪ್ರಸ್ತಾಪವಾಗಿದೆಯಾದರೂ, ಕೇಂದ್ರದ ಕಡೆಗೆ ಬೊಟ್ಟು ಮಾಡುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಮೇಕೆದಾಟು ಸಮತೋಲನ ಜಲಾಶಯ ಯೇಜನೆ ಪೂರ್ವ ಸಿದ್ಧತಾ ಕಾರ್ಯ ಅಂತಿಮಗೊಂಡಿದ್ದು, ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರಗಳು ತೀರುವಳಿ ದೊರತೆ ಕೂಡಲೇ ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಇದರೊಂದು ಚರ್ವಿತ ಚರ್ವಣವಲ್ಲದೇ ಬೇರೇನೂ ಅಲ್ಲ.
ರಾಮನಗರ ಜಿಲ್ಲೆಗೆ ಕೈಗಾರಿಕೆ, ತೋಟಗಾರಿಕೆ, ಪ್ರವಾಸೋದ್ಯಮ ಸೇರಿ ಹಲವು ವಿಭಾಗಗಳಲ್ಲಿ ಒಂದಿಷ್ಟು ಹೊಸ ದಿಕ್ಕನ್ನು ಸಿದ್ದರಾಮಯ್ಯ ಬಜೆಟ್‌ನಲ್ಲಿ ತೋರುತ್ತಾರೆ ಎನ್ನುವ ಆಶಾ ಭಾವನೆ ಇತ್ತು. ನೀರಾ ಇಳಿಸುವ ಮೂಲಕ ನಷ್ಟ ಪರಿಹಾರಕ್ಕೆ ರೈತರು ಯತ್ನ ನಡೆಸುತ್ತಿದ್ದು, ಇದಕ್ಕೆ ನೆರವಿನ ನಿರೀಕ್ಷೆಯಲ್ಲಿ ಇದ್ದರು. ಆದರೆ, ಇದರ ಬಗ್ಗೆ ಚಕಾರ ಎತ್ತಲೇ ಇಲ್ಲ. ರಾಜ್ಯದಲ್ಲಿ ಹೊಸ ಸ್ಟ್ರಾರ್ಟಪ್‌ಗಳಿಗೆ ಸಿದ್ದರಾಮಯ್ಯ ನೆರವಿಗೆ ಬಗ್ಗೆ ಪ್ರಸ್ತಾಪ ಮಾಡಿದ್ದರೂ, ಮಾಗಡಿ, ಕನಕಪುರ ಮತ್ತು ಚನ್ನಪಟ್ಟಣದಲ್ಲಿ ಕೈಗಾರಿಕೆ ಉಗಮಕ್ಕೆ ನಾಂದಿ ಹಾಡಲೇ ಇಲ್ಲ. ಇನ್ನು ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದ್ದರೂ ಇದರ ಬಗ್ಗೆಯೂ ಎಲ್ಲಿಯೂ ಪ್ರಸ್ತಾಪ ಮಾಡಲೇ ಇಲ್ಲ. ಇನ್ನು ರಾಮನಗರ ಜಿಲ್ಲೆಗೂ ಮೆಟ್ರೋ ವಿಸ್ತರಣೆ ಎನ್ನುವ ಬಹುದೊಡ್ಡ ನಿರೀಕ್ಷೆ ಇತ್ತು. ಆದರೆ, ಇದ್ಯಾವುದರೂ ಬಗ್ಗೆಯೂ ಪ್ರಸ್ತಾಪಿಸದಿರುವುದು ಸಿಎಂಗೇಕೆೆ ಜಿಲ್ಲೆಯ ಬಗೆಗಿನ ತಾತ್ಸಾರ ಎನ್ನುವಂತೆ ಆಗಿದೆ.
ಬಜೆಟ್‌ನಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯಿಂದ ರಾಮನಗರ ಮತ್ತು ಉಲ್ಲಾಳ ನಗರಗಳಿಗೆ ಅಮೃತ್ - 2 ಯೋಜನೆಯಡಿ 750 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ, ಈ ರಾಮನಗರದಲ್ಲಿ ಈಗಾಗಲೇ 456 ಕೋಟಿ ರೂ. ವೆಚ್ಚದಲ್ಲಿ 24/7 ಕುಡಿಯುವ ನೀರು ಯೋಜನೆ ಕಾಮಗಾರಿ ಪೂರ್ಣಗೊಂಡು, ಪ್ರಾಯೋಗಿಕವಾಗಿ ನೀರು ಹರಿಸಿ, ನ್ಯೂನತೆ ಸರಿಪಡಿಸಲಾಗುತ್ತಿದೆ. ಆದರೆ, ಈಗ ಮತ್ತೆ ಘೋಷಣೆ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ.
* ರಾಮನಗರ - ಚನ್ನಪಟ್ಟಣ ಮಧ್ಯೆ ನಿರ್ಮಾಣ ಮಾಡಲಾಗುತ್ತಿರುವ ಹೈಟೆಕ್ ರೇಷ್ಮೆ ಮಾರುಕಟ್ಟೆಯ ಎರಡನೇ ಹಂತದ ಅಭಿವೃದ್ಧಿಗೆ ಹಣ ಮೀಸಲು.
* ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ
* ಮಾಗಡಿ - ಕನಕಪುರದ ಹುಣಸನಹಳ್ಳಿ (ತಮಿಳುನಾಡು ಗಡಿ) ನಡುವೆ ಕೆಶಿಫ್ ಅಡಿ 95 ಕಿಮಿ ಉದ್ದದ ಹೆದ್ದಾರಿ ಅಭಿವೃದ್ಧಿ.
* ಕನಕಪುರದ ಗರಳಾಪುರ ಮತ್ತು ಇತರೆ 12 ಕೆರೆಗಳನ್ನು ತುಂಬಿಸುವ ಯೋಜನೆ
* ದೊಡ್ಡ ಆಲಹಳ್ಳಿಯಲ್ಲಿ ಹನಿ ನೀರಾವರಿ ಯೋಜನೆ
* ಮಾಗಡಿ ತಾಲೂಕು ಆಸ್ಪತ್ರೆ ನವೀಕರಣ
* ಅಮೃತ್ 02 ಯೋಜನೆ ಅಡಿ ರಾಮನಗರ ನಗರಕ್ಕೆ ನೀರು ಪೂರೈಕೆ ಯೋಜನೆ (ಈಗಾಗಲೇ 456 ಕೋಟಿ ರೂ ವೆಚ್ಚದಲ್ಲಿ ನಿರಂತರ ನೀರು ಪೂರೈಕೆ ಯೋಜನೆ ಕಾಮಗಾರಿ ಪೂರ್ಣಗೊಂಡು ನೀರು ಪೂರೈಕೆ ಆಗುತ್ತಿದೆ)
ಇದೊಂದು ಉತ್ತಮ ಬಜೆಟ್, ಎಲ್ಲ ವರ್ಗದ ಜನರಿಗೆ ಒಳಿತು ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆ ನೀಡಿದ್ದಾರೆ. ರಾಮನಗರಕ್ಕೂ ಸಾಕಷ್ಟು ಯೋಜನೆ ನೀಡಿದ್ದಾರೆ. ಬಜೆಟ್ ಹೊರತಾಗಿಯೂ ರಾಮನಗರಕ್ಕೆ ಹೆಚ್ಚಿನ ಅನುದಾನ ನೀಡುವ ಭರವಸೆ ಮುಖ್ಯಮಂತ್ರಿ ಅವರಿಂದ ಸಿಕ್ಕಿದೆ. ಎಚ್.ಎ. ಇಕ್ಬಾಲ್ ಹುಸೇನ್, ಶಾಸಕ ರಾಮನಗರರಾಜ್ಯದ ಎಲ್ಲ ವರ್ಗದ ಜನ ಮೆಚ್ಚುವಂತಹ ಉತ್ತಮ ಬಜೆಟ್ ಅನ್ನು ಸಿದ್ದರಾಮಯ್ಯ ಅವರು ನೀಡಿದ್ದಾರೆ. ಕ್ಷೇತ್ರಕ್ಕೆ ಒಂದಿಷ್ಟು ಯೋಜನೆಗಳು ದೊರೆಯುತ್ತವೆ ಎನ್ನುವ ವಿಶ್ವಾಸ ಇತ್ತು. ಬಜೆಟ್‌ನಲ್ಲಿ ಘೋಷಣೆ ಮಾಡಲಿಲ್ಲ ಎಂದ ಮಾತ್ರಕ್ಕೆ ಯೋಜನೆ ಕೊಡುವುದಿಲ್ಲ ಎಂದರ್ಥವಲ್ಲ. ಕ್ಷೇತ್ರಕ್ಕೆ ಬೇಕಾದ ಯೋಜನೆಗಳು ಶೀಘ್ರವಾಗಿ ದೊರೆಯಲಿವೆ. ಇದಕ್ಕೆ ಸಿಎಂ ಸಹಕಾರ ನೀಡುತ್ತಾರೆ. ಸಿ.ಪಿ.ಯೋಗೇಶ್ವರ್, ಶಾಸಕ, ಚನ್ನಪಟ್ಟಣ