ಜಿಲ್ಲೆ

ಉದ್ಘಾಟನೆಗೆ ಭರ್ತಿಯಾಗುವುದೇ ವಸ್ತುಪ್ರದರ್ಶನ

ಅವಿನಾಶ್ ಜೈನಹಳ್ಳಿ

ಅವಿನಾಶ್ ಜೈನಹಳ್ಳಿ ಮೈಸೂರು
‘ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದರು’ ಎಂಬ ಗಾದೆ ಮಾತು ಪ್ರತಿ ವರ್ಷ ದಸರಾ ವಸ್ತುಪ್ರದರ್ಶನದ ಪೂರ್ವ ಸಿದ್ಧತೆಯನ್ನು ತರಾತುರಿಯಲ್ಲಿ ನಡೆಸುವ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಅಕ್ಷರಶಃ ಅನ್ವಯವಾಗುತ್ತದೆ.


ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ದಸರಾ ವಸ್ತುಪ್ರದರ್ಶನ ಪ್ರತಿ ವರ್ಷ ಅಪೂರ್ಣ ಸಿದ್ಧತೆಯೊಂದಿಗೆ ಉದ್ಘಾಟನೆಯಾಗುವುದು ಸಾಮಾನ್ಯವಾಗಿದೆ. ಈ ಬಾರಿಯಾದರೂ ಉದ್ಘಾಟನೆ ದಿನವೇ ಪೂರ್ಣ ಮಳಿಗೆಗಳೊಂದಿಗೆ ವಸ್ತುಪ್ರದರ್ಶನ ಉದ್ಘಾಟನೆಯಾಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಕಳೆದ ವರ್ಷ ದಸರೆ ಆರಂಭಕ್ಕೂ 15 ದಿನ ಮೊದಲೇ ವಸ್ತುಪ್ರದರ್ಶನ ಉದ್ಘಾಟನೆಗೆ ಜಿಲ್ಲಾಡಳಿ ಮುಂದಾಗಿದ್ದರೂ ಸಾಧ್ಯವಾಗಲಿಲ್ಲ. ಕರೊನಾ ಕಾರಣ 2020, 2021ರಲ್ಲಿ ಸರಳ ದಸರಾ ಆಯೋಜಿಸಲಾಗಿತ್ತು. ಹಾಗಾಗಿ, ಆ 2 ವರ್ಷ ವಸ್ತುಪ್ರದರ್ಶನವನ್ನೂ ಆಯೋಜಿಸಲಿಲ್ಲ. ಅಲ್ಲದೆ, ಹಿಂದಿನ ಎರಡು ವರ್ಷಗಳಲ್ಲೂ ಬಹುತೇಕ ಖಾಲಿ ಮಳಿಗೆಗಳಿಂದಲೇ ಉದ್ಘಾಟನೆಯಾಗಿ ಎಂದಿನಂತೆ ಹಳೇಚಾಳಿ ಮುಂದುವರಿಸಿತ್ತು. ಅಪೂರ್ಣ ಮಳಿಗೆಗಳೊಂದಿಗೆ ವಸ್ತುಪ್ರದರ್ಶನ ಉದ್ಘಾಟನೆಯಾಗಿದ್ದು ಇತಿಹಾಸ.

ಇನ್ನು ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ವೇಳೆ ದಸರಾ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ‘ದಸರಾ ವಸ್ತುಪ್ರದರ್ಶನದ ಉದ್ಘಾಟನೆ ದಿನವೇ ಜಿಲ್ಲಾ ಪಂಚಾಯಿತಿಗಳು ಹಾಗೂ ಸರ್ಕಾರದ ಎಲ್ಲ ಇಲಾಖೆಗಳ ಮಳಿಗೆಗಳು ಉದ್ಘಾಟನೆಗೊಳ್ಳಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೂ, ಆ ವರ್ಷವೂ ಅರ್ಧದಷ್ಟು ಮಳಿಗೆಗಳು ಮಾತ್ರ ಉದ್ಘಾಟನೆಗೊಂಡಿದ್ದ ನಿದರ್ಶನವೂ ಇದ್ದು, ಸಿಎಂ ಆದೇಶಕ್ಕೂ ಕವಡೆ ಕಿಮ್ಮತ್ತು ಸಿಗದಂತಾಗಿತ್ತು. ಈಗ ಮತ್ತೆ ಸಿದ್ದರಾಮಯ್ಯ ಅವರೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಈ ಸಲದ ದಸರಾ ಉನ್ನತಾಧಿಕಾರ ಸಮಿತಿ ಸಭೆಯಲ್ಲೂ ‘ಈ ಬಾರಿಯಾದರೂ ದಸರೆಯ ಉದ್ಘಾಟನೆ ದಿನವೇ ಸಂಪೂರ್ಣ ಮಳಿಗೆಯೊಂದಿಗೆ ವಸ್ತುಪ್ರದರ್ಶನವನ್ನು ಉದ್ಘಾಟಿಸಬೇಕು’ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅದರಂತೆ, ಈ ವರ್ಷವಾದರೂ ಸಂಪೂರ್ಣ ಮಳಿಗೆಗಳೊಂದಿಗೆ ವಸ್ತುಪ್ರದರ್ಶನ ಉದ್ಘಾಟನೆಗೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ನಿಗದಿತ ಸಮಯದಲ್ಲಿ ಸಂಪೂರ್ಣ ಸಿದ್ಧತೆಯೊಂದಿಗೆ ವಸ್ತುಪ್ರದರ್ಶನವನ್ನು ಉದ್ಘಾಟಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ದಸರಾ ವಸ್ತುಪ್ರದರ್ಶನದ ಉದ್ಘಾಟನೆ ದಿನವೇ ಜಿಲ್ಲಾ ಪಂಚಾಯಿತಿಗಳು ಹಾಗೂ ಸರ್ಕಾರದ ಎಲ್ಲ ಇಲಾಖೆಗಳ ಮಳಿಗೆಗಳನ್ನು ಉದ್ಘಾಟಿಸಲು ದಸರಾ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಈ ಸಂಬಂಧ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ದಸರೆ ಆರಂಭದಲ್ಲೇ ವಸ್ತುಪ್ರದರ್ಶನದಲ್ಲಿ ಎಲ್ಲ ಮಳಿಗೆಗಳು ಆರಂಭಗೊಳ್ಳುವ ರೀತಿ ನೋಡಿಕೊಳ್ಳಲಾಗುತ್ತದೆ. ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ