raichur 
ಜಿಲ್ಲೆ

ರಾಯರ ಕ್ಷೇತ್ರದಲ್ಲಿ ಭಕ್ತ ಸಾಗರದ ಸಂಭ್ರಮ ಬೃಂದಾವನ ದರ್ಶನಕ್ಕೆ ಕಾಯುವಿಕೆ, ಜನರ ನಿಭಾಯಿಸಲು ಶ್ರೀಮಠದ ಹರಸಾಹಸ

ರಾಚಯ್ಯ ಸ್ವಾಮಿ ಮಾಚನೂರು

 ರಾಯಚೂರು ಮಂತ್ರಾಲಯದ ಶ್ರೀರಾಯರ ದರ್ಶನಕ್ಕೆ ಸಾಮಾನ್ಯವಾಗಿ ಬೇಸಿಗೆ ರಜೆ ದಿನಗಳಲ್ಲಿ ಲಕ್ಷ ಸಂಖ್ಯೆಯ ಭಕ್ತರು ಭೇಟಿ ನೀಡುವುದು ರೂಢಿ. ಆದರೆ ಇದೀಗ ರಜೆ ದಿನಗಳ ನಂತರವೂ ಭಕ್ತರು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಶ್ರೀಮಠವು ಭಕ್ತರಿಗೆ ಸೌಲಭ್ಯ ಒದಗಿಸಲು ಹರಸಾಹಸ ಪಡುವಂತಾಗಿದೆ.

ಶ್ರೀಗುರುಸಾರ್ವಭೌಮರ ಆರಾಧನೆ ವೇಳೆ ಹಾಗೂ ವಿಶೇಷ ಉತ್ಸವ, ಹಬ್ಬದ ಸಂದರ್ಭದಲ್ಲಿ ಮಂತ್ರಾಲಯದಲ್ಲಿ ಭಕ್ತರ ಸಂಖ್ಯೆ ಲಕ್ಷ ದಾಟುತ್ತದೆ. ಬೇಸಿಗೆಯ ಶಾಲಾ ಕಾಲೇಜು ರಜೆಯಲ್ಲೂ ಭಕ್ತರು ರಾಯರ ಕ್ಷೇತ್ರಕ್ಕೆ ದೌಡಾಯಿಸುವುದು ಸಹಜ. ಈಗ ರಜೆ ಮುಗಿದರೂ ಎರಡು ಲಕ್ಷ ಭಕ್ತರು ಕಳೆದೆರಡು ದಿನಗಳಿಂದ ಭೇಟಿ ನೀಡಿರುವುದು ರಾಯರ ಕ್ಷೇತ್ರದ ಆಕರ್ಷಣೆಗೆ ಸಾಕ್ಷಿಯಾಗಿದೆ.

ಭಕ್ತರ ಪ್ರವಾಹ

ನದಿಯಲ್ಲಿನ ಪ್ರವಾಹ ಕಂಡಿದ್ದ ಮಂತ್ರಾಲಯ ಶ್ರೀಕ್ಷೇತ್ರದಲ್ಲಿ ಭಾನುವಾರ ಭಕ್ತರ ಪ್ರವಾಹ ಕಾಣುವಂತಾಯಿತು. ಸಾಮಾನ್ಯವಾಗಿ ರಾಯರ ಆರಾಧನೆಯ ಸಂದರ್ಭದಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸುವುದು ರೂಢಿ. ಆದರೆ, ಬಹು ವರ್ಷಗಳ ನಂತರ ಬೇಸಿಗೆ ಯಾದ ಬಳಿಕ ಶನಿವಾರ ಮತ್ತು ಭಾನುವಾರ ಲಕ್ಷಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ಕಂಡಿತು. ಬೆಳ್ಳಂಬೆಳಗ್ಗೆ ಧಾವಿಸಿದ ಭಕ್ತರ ಮಹಾಪೂರವು ತುಂಗಭದ್ರಾ ನದಿಯಲ್ಲಿ ಮಿಂದೆದ್ದು, ಶ್ರೀರಾಯರ ದರ್ಶನ ಪಡೆದು ಹರಕೆ ತೀರಿಸುವ ಕೆಲಸ ಮಾಡಿದರು. ಬೃಂದಾವನ ದರ್ಶನಕ್ಕೆ ಅವಕಾಶವಿರುವ ಎಲ್ಲ ಬಾಗಿಲುಗಳನ್ನೂ ತೆರೆದು ಮಠದ ಆಡಳಿತ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತು. ಪರಿಣಾಮ ಭಕ್ತರು ಸಾಲಾಗಿ ನಿಂತು ಗ್ರಾಮದೇವತೆ ಶ್ರೀಮಂಚಾಲೆಮ್ಮದೇವಿ ದರ್ಶನ ಆನಂತರದಲ್ಲಿ ಶ್ರೀರಾಯರ ಮೂಲ ಬೃಂದಾವನದ ದರ್ಶನ ಪಡೆದರು.

ಮಂತ್ರಾಲಯ ಭರ್ತಿ

ಪ್ರತಿ ಭಾರಿ ಆರಾಧನೆ ಮತ್ತು ಹಬ್ಬದ ದಿನಗಳ ಸಂದರ್ಭ ಮಂತ್ರಾಲಯದಲ್ಲಿ ಭಾರೀ ಸಂಖ್ಯೆಯಲ್ಲಿ ಜನತೆ ಕ್ಷೆತ್ರಕ್ಕೆ ಆಗಮಿಸಿದ್ದಾರೆ. ಆದರೆ ಮಕ್ಕಳ ಶಾಲೆಗಳು ಪ್ರಾರಂಭವಾಗಿದ್ದು, ಮಳೆಯು ಜೋರಾಗಿದ್ದರು ಸಹ ಸಂಖ್ಯೆ ಮಾತ್ರ ಕಡಿಮೆಯಾಗದೆ ಇರುವುದರಿಂದ ಶ್ರೀಮಠದಲ್ಲಿ ವಸತಿ ಮತ್ತಿತರೆ ಸೌಲಭ್ಯ ಒದಗಿಸುವುದು ಮಠದ ಆಡಳಿತಕ್ಕೆ ಕಷ್ಟವಾಗುತ್ತದೆ. ಆದರೆ ಭಕ್ತರಿಗೆ ರಾಯರ ಕ್ಷೇತ್ರಕ್ಕೆ ಭೇಟಿ ನೀಡುವುದೊಂದೇ ಗುರಿಯಾಗುವುದರಿಂದ ದಿನವೂ 50 ರಿಂದ 1 ಲಕ್ಷ ಜನ ಭಕ್ತರು ರಾಯರ ದರ್ಶನಕ್ಕೆ ಧಾವಿಸುತ್ತಿದ್ದಾರೆ. ಹೀಗೆ ರಾಯರ ಕ್ಷೆತ್ರಕ್ಕೆ ಆಗಮಿಸುವವರು ಹುಂಡಿಯಲ್ಲಿ ಕಾಣಿಕೆ ಸಲ್ಲಿಸುವ ಮೂಲಕ ಹರಕೆ ತೀರಿಸುತ್ತಿದ್ದು, ಕಾಣಿಕೆಯ ಮೊತ್ತ ಪ್ರತಿ ತಿಂಗಳು ದಾಖಲೆಯ ಮಟ್ಟಕ್ಕೆ ಸಂಗ್ರಹವಾಗುತ್ತಿದೆ.

ಈ ತಿಂಗಳಲ್ಲಿ ಎರಡನೇ ಶನಿವಾರ ಹಾಗೂ ಭಾನುವಾರ ರಜೆ ಇರುವುದರಿಂದ ಭಕ್ತದಿಗಳು ವಾರದ ಹಿಂದೆಯೇ ಮಂತ್ರಾಲಯದ ಯಾತ್ರಿನಿವಾಸಗಳು, ದಾನಿಗಳ ವಸತಿಗೃಹಗಳು ಹಾಗೂ ಖಾಸಗಿ ಲಾಡ್ಜ್‌ಗಳು ಬುಕ್ ಮಾಡಿಕೊಂಡಿದ್ದಾರೆ. ಬುಕ್ ಮಾಡದೇ ನೇರವಾಗಿ ಬೆಂಗಳೂರು ಸೇರಿ ವಿವಿಧ ನಗರಗಳಿಂದ ಬಂದ ನೂರಾರು ಭಕ್ತರು ಶನಿವಾರ ಹಾಗೂ ಭಾನುವಾರ ವಸತಿ ಸಮಸ್ಯೆ ಅನುಭವಿಸಬೇಕಾಯಿತು. ಮಂತ್ರಾಲಯದಲ್ಲಿ ವಸತಿ ವ್ಯವಸ್ಥೆ ಆಗದ ಕಾರಣ ಅನೇಕ ಭಕ್ತರು ರಾಯಚೂರಿಗೆ ಬಂದು ಲಾಡ್ಜ್‌ಗಳಲ್ಲಿ ವಾಸ್ತವ್ಯ ಮಾಡಿ ನಂತರ ಮಂತ್ರಾಲಯ ಮಠಕ್ಕೆ ತೆರಳಿ ರಾಯರ ದರ್ಶನ ಪಡೆದರು. ಪ್ರಸಾದ ಖರೀದಿಸಲು ಸಹ ಭಕ್ತರು ಪ್ರಯಾಸಯ ಪಡಬೇಕಾಯಿತು. ಇಲ್ಲಿನ ವ್ಯಾಪಾರ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯಿತು.

ಆದಾಯ ಏರಿಕೆ

ಪ್ರತಿ ವರ್ಷ ಆರಾಧನೆ ವೇಳೆ ದೊರೆಯುತ್ತಿದ್ದ ಆದಾಯಕ್ಕಿಂತ ಇದೀಗ ಪ್ರತಿ ತಿಂಗಳು ಕಾಣಿಕೆಯ ಆದಾಯ ಹೆಚ್ಚಾಗುತ್ತಿದೆ. ಪ್ರತಿ ತಿಂಗಳು ಹುಂಡಿ ತೆರೆದು ಎಣಿಸಿದಾಗಲೆಲ್ಲ ಕಾಣಿಕೆಯ ಮೊತ್ತ ದಾಖಲೆಯ ಮಟ್ಟಕ್ಕೆ ಬಂದು ತಲುಪುತ್ತಿರುವುದು ರಾಯರ ಸನ್ನಿಧಾನಕ್ಕೆ ಭೇಟಿ ನೀಡುವವರ ಸಂಖ್ಯೆ ಏರುಮುಖವಾಗುತ್ತಿರುವುದನ್ನು ತೋರಿಸುತ್ತಿದೆ

ಮಂತ್ರಾಲಯ ಕ್ಷೆತ್ರಕ್ಕೆ ವಿಶ್ವದಾದ್ಯಂತ ಭಕ್ತರಿದ್ದಾರೆ.

ಅವರೆಲ್ಲರೂ ಈ ಮೊದಲು ಗುರುವಾರ ಮತ್ತು ವಾರದ ಕೊನೆಯ ಶನಿವಾರ ಮತ್ತು ಭಾನುವಾರ ಕ್ಷೆತ್ರಕ್ಕೆ ಆಗಮಿಸುತ್ತಿದ್ದರು. ಆದರೆ, ಇದೀಗ ದಿನವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಂತ್ರಾಲಯ ಕ್ಷೆತ್ರಕ್ಕೆ ದೌಡಾಯಿಸುತ್ತಿದ್ದು ಭಕ್ತರ ಹರಿವಿನ ಜತೆಗೆ ಕಾಣಿಕೆಯ ಹರಿವೂ ತೀವ್ರ ಹೆಚ್ಚಳ ಕಂಡಿದೆ. ಕಳೆದ ಫೆಬ್ರುವರಿಯಿಂದ ಮೇ ವರೆಗೆ ಶ್ರೀಮಠದ ಹುಂಡಿಯಲ್ಲಿ ಒಟ್ಟು 15.61 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದ್ದು, ಈ ಪೈಕಿ ಫೆಬ್ರುವರಿಯಲ್ಲಿ 2.29 ಕೋಟಿ ರೂ.,ಮಾರ್ಚ್‌ನಲ್ಲಿ 3.48 ಕೋಟಿ ರೂ.,ಎಪ್ರಿಲ್‌ನಲ್ಲಿ 4.05 ಕೋಟಿ ರೂ.,ಮೇ ತಿಂಗಳಿನಲ್ಲಿ 3.79 ಕೋಟಿ ರೂ. ಸಂಗ್ರಹವಾಗಿದೆಂದು ಶ್ರೀಮಠ ತಿಳಿಸಿದೆ.