ಹುಬ್ಬಳ್ಳಿ: ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆ ಮತ್ತು ಉಪದೇಶಗಳು ಮಾನವ ಕುಲಕ್ಕೆ ದಾರಿದೀಪವಾಗಿವೆ. ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಸಮೃದ್ಧಿ ಜತೆಗೆ ಸಾರ್ಥಕತೆ ತರಲಿದೆ ಛಬ್ಬಿ ಗ್ರಾಪಂ ಅಧ್ಯಕ್ಷ ರವಿ ಹುಲ್ಲಂಬಿ ಹೇಳಿದರು.
ತಾಲೂಕಿನ ಛಬ್ಬಿ ಗ್ರಾಮದಲ್ಲಿ ಗ್ರಾಪಂ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಬದುಕಿಗೆ ಅವಶ್ಯಕತೆ ಇರುವ ತತ್ವ, ಆದರ್ಶಗಳು, ಬದುಕಿನ ಎಲ್ಲ ಅಂಶಗಳು ಮಹಾಕಾವ್ಯ ರಾಮಾಯಣದಲ್ಲಿ ಅಡಕವಾಗಿವೆ. ಸಂತ ಸತ್ಪುರುಷರ ನಡೆ, ನುಡಿ ಅವರು ಅನುಸರಿಸಿದ ಮಾರ್ಗದಲ್ಲಿ ನಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಪಿಡಿಒ ಚಂದ್ರಶೇಖರ ಪೂಜಾರಿ ಮಾತನಾಡಿ, ರಾಮಾಯಣದಲ್ಲಿ ಉಲ್ಲೇಖಿಸಿರುವ ಅಂಶಗಳು ಪ್ರಸ್ತುತವಾಗಿವೆ. ಆದಿಕವಿ ಹೇಳಿಕೊಟ್ಟ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದರು.
ಗ್ರಾಪಂ ಉಪಾಧ್ಯಕ್ಷ ರಸೂಲಬಿ ಹುಬ್ಬಳ್ಳಿ, ಸದಸ್ಯರಾದ ಹಮೀದ್ ಮುಲ್ಲಾ, ರವಿ ಕಾಗೇನವರ, ಗದಿಗೆಪ್ಪ ಭಂಡಿವಾಡ, ಭಗವಂತ ಬಸಾಪೂರ, ರುದ್ರಪ್ಪ ಅಗಡಿ, ಪುಷ್ಪಲತಾ ಕಾಳೆ, ಜರೀನಾಬಿ ದುಂಡಶಿ, ಗೌರವ್ವ ಕುರುಬರ, ಲಲಿತಾ ಕಲ್ಲಣ್ಣವರ, ರತ್ನವ್ವ ತಳವಾರ, ಗ್ರಾಪಂ ಸಿಬ್ಬಂದಿ, ಗ್ರಾಮದ ವಾಲ್ಮೀಕಿ ಸಮಾಜದ ಹಿರಿಯರು, ಗ್ರಾಮಸ್ಥರು ಇದ್ದರು.