ಜಿಲ್ಲೆ

ನವಭಾರತ ನಿರ್ಮಾಣದ ಪರ್ವಕಾಲ

ಧಾರವಾಡ: ಯುವ ಪೀಳಿಗೆ ಮೊಬೈಲ್ ಗುಂಗಿನಿಂದ ಹೊರಬರಬೇಕು. ಕಾಲಹರಣ ಬಿಟ್ಟು ಸದುದ್ದೇಶಗಳಿಗೆ ಮೊಬೈಲ್ ಬಳಸಬೇಕು. ಇದು ನವಭಾರತ ನಿರ್ಮಾಣದ ಪರ್ವಕಾಲ. ಯುವ ಸಮೂಹ ಜಾಗೃತರಾಗಬೇಕು. ಸ್ವಾಭಿಮಾನಿ ನಾಯಕರಿಂದ ಶಕ್ತಿಯುತ ನವ ಭಾರತ ನಿರ್ಮಾಣ ಸಾಧ್ಯ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ಲಿಂಗಾಯತ ಭವನದಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್‌ನ 11ನೇ ವಾರ್ಷಿಕ ಸಮ್ಮೇಳನದಲ್ಲಿ ಶುಕ್ರವಾರ ಆಯೋಜಿಸಿದ್ದ ಯುವ ಸಮಾವೇಶದಲ್ಲಿ `ಸ್ವಾಭಿಮಾನಿ ತರುಣ ಆತ್ಮನಿರ್ಭರ ಭಾರತ' ವಿಷಯ ಕುರಿತು ಅವರು ಮಾತನಾಡಿದರು.

ಹಸಿವು ಇದ್ದಲ್ಲಿ ಸ್ವಾಭಿಮಾನ ಇರುತ್ತದೆ. ಹಸಿವು ಎದುರಿಸಿದವರು ಸ್ವಾಭಿಮಾನದಿಂದ ದೊಡ್ಡ ನಾಯಕರಾಗಿ ಆಳಿದ ನಿದರ್ಶನಗಳಿವೆ. ಸ್ವಾಭಿಮಾನಕ್ಕೆ ಎದುರಾಗುವ ಅವಮಾನ ಮೆಟ್ಟಿ ನಿಂತಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಈ ನಾಡು ನನ್ನದು ಎಂಬ ತುಡಿತ ವಿವೇಕಾನಂದರಲ್ಲಿತ್ತು. ನಾಡು- ನುಡಿ, ಸಂಸ್ಕೃತಿ ನಮ್ಮದು ಎಂಬ ಅಭಿಮಾನ, ತುಡಿತವನ್ನು ಯುವ ಸಮುದಾಯ ಅಳವಡಿಸಿಕೊಳ್ಳಬೇಕು ಎಂದರು.

ಭಾರತವು ಆತ್ಮನಿರ್ಭರದತ್ತ ಮುನ್ನಡೆದಿದೆ. ಪಾಕಿಸ್ತಾನಕ್ಕೆ ಅದರ ಭಾಷೆಯಲ್ಲಿಯೇ ಎಚ್ಚರಿಕೆ ನೀಡುವಂತಹ ತಾಕತ್ತು ಹೊಂದಿದೆ. ವಿಶ್ವದ ಶ್ರೀಮಂತ 5 ದೇಶಗಳ ಪಟ್ಟಿಯಲ್ಲಿ ಭಾರತವೂ ಇರುವುದು ಹೆಮ್ಮೆಯ ಸಂಗತಿ.

`ವಿಜ್ಞಾನ ಮತ್ತು ಆಧ್ಯಾತ್ಮದೊಂದಿಗೆ ಯುವ ಜನತೆಯ ಬೆಳವಣಿಗೆ' ಕುರಿತು ತುಮಕೂರಿನ ರಾಮಕೃಷ್ಣ ವಿವೇಕಾಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮ ಅಂತರಂಗಕ್ಕೆ, ವಿಜ್ಞಾನ ಬಹಿರಂಗಕ್ಕೆ ಸಂಬಂಧಿಸಿದೆ. ವಿಜ್ಞಾನಕ್ಕೆ ಸೀಮಿತತೆ ಇದ್ದರೆ ಆಧ್ಯಾತ್ಮಕ್ಕೆ ಮಿತಿ ಇಲ್ಲ. ಯುವಕರು ಆಧ್ಯಾತ್ಮನೊಂದಿಗೆ ವಿಜ್ಞಾನ ಅಳವಡಿಸಿಕೊಂಡು ಸಾಗಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.

`ಸ್ವಾಮಿ ವಿವೇಕಾನಂದ- ಒಂದು ಚಿಂತನ ಸ್ಪೂರ್ತಿ' ವಿಷಯ ಕುರಿತು ಚಿಂತಕ ಸಂದೀಪ್ ವಶಿಷ್ಠ ಉಪನ್ಯಾಸ ನೀಡಿದರು. ಸ್ವಾಮಿ ವಿಜಯಾನಂದ ಸರಸ್ವತಿ, ಸ್ವಾಮಿ ಪರಮಾನಂದಜಿ ಮಹಾರಾಜ್ ಉಪಸ್ಥಿತರಿದ್ದರು.