ಜಿಲ್ಲೆ

ವಿಜೃಂಭಣೆಯ ಕಳಸ ಪ್ರತಿಷ್ಠಾಪನೆ

Mysuru - Desk - Naveen Kumar H P


ವಿಜಯವಾಣಿ ಸುದ್ದಿಜಾಲ ಅರಸೀಕೆರೆ (ಗ್ರಾಮಾಂತರ)
ತಾಲೂಕಿನ ಬಾಣಾವರ ಹೋಬಳಿಯ ಸುಕ್ಷೇತ್ರ ಬೈರಾಂಬುದಿಯ ಶ್ರೀ ಹೊಂಗ್ಯಮ್ಮ ಮಲಿಗಮ್ಮ ದೇವಿ ಹಾಗೂ ಶ್ರೀ ಚೆಲುವರಾಯ ದೂತರಾಯ ಸ್ವಾಮಿ ಅವರ ಉತ್ಸವ ಮೂರ್ತಿಗಳ ವಿಮಾನ ಗೋಪುರ ಕಳಸ ಪ್ರತಿಷ್ಟಾಪನಾ ಮಹೋತ್ಸವ ಸೋಮವಾರ ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.


ಭಾನುವಾರ ಸಂಜೆ ಗಣಪತಿ ಪೂಜೆ ಪುಣ್ಯಹವಾಚನದೊಂದಿಗೆ ಗ್ರಾಮದ ಮೂಲಸ್ಥಾನದ ಹೊಂಗ್ಯಮ್ಮ ದೇವಿಯವರಿಗೆ ಪೂಜೆ ಸಲ್ಲಿಸಲಾಯಿತು. ನಂತರ ಹೋಮ ಹವನಾದಿಗಳನ್ನು ಬಿ.ಎಸ್.ಸಂತೋಶ್ ಶರ್ಮ ಮತ್ತು ವೃಂದದವರಿಂದ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಸಂಪ್ರದಾಯ ವಿಧಾನದಂತೆ ನೆರವೇರಿತು. ಯಾದಾಪುರದ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ, ಜವನಹಳ್ಳಿ ಜವರಲಿಂಗೇಶ್ವರ ಸ್ವಾಮಿ ಅವರು ಹೀಗೆ ಗ್ರಾಮದ ಸುತ್ತಮುತ್ತಲಿನ ದೇವರುಗಳು ದೇವಸ್ಥಾನಕ್ಕೆ ಆಗಮಿಸಿದ್ದವು.


ಸೋಮವಾರ ಬೆಳಗ್ಗೆ 101 ಸುಮಂಗಲಿಯರಿಂದ ಗಂಗಾಪೂಜೆಯೊಂದಿಗೆ ಬ್ರಾಹ್ಮಿ ಮೂಹೂರ್ತದಲ್ಲಿ ಕೋಳಗುಂದ ಶ್ರೀ ಜಯಚಂದ್ರಶೇಖರ ಸ್ವಾಮೀಜಿ ಹಾಗೂ ಕ್ಷೇತ್ರದ ಶ್ರೀ ಚೆಲುವರಾಯ ದೂತರಾಯ ಸ್ವಾಮಿ ಅವರು ಕಳಸಕ್ಕೆ ಪೂಜೆ ಸಲ್ಲಿಸಿ ಪ್ರತಿಸ್ಥಾಪನಾ ಮಹೋತ್ಸವವು ಶ್ರದ್ದಾಭಕ್ತಿಯೊಂದಿಗೆ ಚಾಲನೆ ನೀಡಲಾಯಿತು. ನಂತರ ಪೂರ್ಣಾಹುತಿ ಬಲಿ, ಕಳಸಾಭಿಷೇಕ, ಮಹಾಮಂಗಳಾರತಿ ಸಲ್ಲಿಸಿ ನೆರೆದಿದ್ದ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಸಾಮೂಹಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.


ಬೈರಾಂಬುದಿ ಗ್ರಾಮವು ನವ ವಧುವಿನಂತೆ ಕಂಗೊಳಿಸಿತ್ತು. ಝಗಮಗಿಸುವ ವಿದ್ಯುತ್ ದೀಪಾಲಂಕಾರ, ಬ್ಯಾನರ್, ಪ್ಲೇಕ್ಸ್ ಗಳು, ಹಸಿರು ಮಾವುವಿನ ತೋರಣ ಬಾಳೆಕಂದುಗಳಿಂದ ಶೃಂಗರಿಸಲಾಗಿತ್ತು. ಸಂಜೆ ಶ್ರೀ ಹೊಂಗಮ್ಮ ಮಲ್ಲಿಗಮ್ಮ ದೇವಿ ಹಾಗೂ ದೇವಸ್ಥಾನಕ್ಕೆ ಆಗಮಿಸಿದ ಎಲ್ಲ ದೇವರುಗಳನ್ನು ವಿಶೇಷ ಅಲಂಕಾರದಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು. ಶ್ರೀ ಚೆಲುವರಾಯ ಸ್ವಾಮಿ ದೂತರಾಯ ಸ್ವಾಮಿ ಕುಣಿತವು ನೆರೆದಿದ್ದ ಭಕ್ತರ ಕಣ್ಮನ ಸೆಳೆಯಿತು.


ಶಾಸಕ ಕೆ.ಎಂ.ಶಿವಲಿಂಗೇಗೌಡ , ತಹಸೀಲ್ದಾರ್ ಸಂತೋಷಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಲಿಂಗಪ್ಪ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಟಿ.ಸಿದ್ದಯ್ಯ (ಸ್ವಾಮಿ) ಸದಸ್ಯರುಗಳಾದ ಬಿ.ಸಿ.ತಿಮ್ಮಯ್ಯ, ಬಿ.ಸಿ.ರಾಮೇಗೌಡ, ಎನ್.ಸತ್ಯನಾರಾಯಣ , ಸೋಮಶೇಖರಪ್ಪ, ಪುಟ್ಟಮ್ಮ, ಶಶಿಕಲಾ, ಸಿದ್ದೇಗೌಡ, ಪ್ರೇಮಾ ಗಂಗಾಧರಯ್ಯ, ಬೈರಾಂಬುದಿ ಗ್ರಾಮ ಸೇರಿದಂತೆ 12 ಹಳ್ಳಿಯ ಗ್ರಾಮಸ್ಥರುಗಳು ಮತ್ತು ಭಕ್ತಾಧಿಗಳು ಭಾಗವಹಿಸಿ ದೇವರ ದರ್ಶನ ಪಡೆದರು.