ಅರಸೀಕೆರೆ: ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಬದುಕಿಗೆ ದಾರಿದೀಪವಾಗಿದೆ ಎಂದು ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.
ತಾಲೂಕು ಕಚೇರಿ ಆವರಣದಲ್ಲಿರುವ ಕಂದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವಾಲ್ಮೀಕಿ ರಚಿತ ಮಹಾಕಾವ್ಯ ರಾಮಾಯಣ ಒಳಿತು, ಕೆಡುಕಿನ ಪರಿಣಾಮ ಏನೆಂಬುದನ್ನು ತೋರಿಸಿಕೊಟ್ಟಿದೆ. ಅಧರ್ಮದ ವಿನಾಶಕ್ಕೆ ಮಹಾಪುರುಷರ ಅವತಾರ ನಿಶ್ಚಿತ. ಯುಗ, ಯುಗದಲ್ಲಿ ದೈವಾಂಶ ಸಂಭೂತರು ಹುಟ್ಟಿ ಬಂದು ಧರ್ಮ ರಕ್ಷಣೆ ಮಾಡಿದ್ದಾರೆ ಎಂದರು.
ವಾಲ್ಮೀಕಿ ಸಮುದಾಯದ ಜನರ ಅಭಿವೃದ್ಧಿ ಮನಗಂಡು ನಗರದ ಆಯಕಟ್ಟಿನ ಜಾಗದಲ್ಲಿ ಸುಸಜ್ಜಿತ ಭವನ ನಿರ್ಮಿಸಲಾಗಿದೆ. ಜತೆಗೆ ದೇಗುಲ ಕಟ್ಟುವ ಕಾರ್ಯಕ್ಕೆ ನಗರಸಭೆ ವತಿಯಿಂದ 5 ಲಕ್ಷ ರೂ.ಅನುದಾನ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ತಹಸೀಲ್ದಾರ್ ಎಂ.ಜಿ.ಸಂತೋಷ್ ಮಾತನಾಡಿ, ಭಾರತೀಯ ಮಹಾ ಕಾವ್ಯಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ಪಸರಿಸುವ ಅಗತ್ಯವಿದೆ ಎಂದು ಹೇಳಿದರು.
ರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ಇಂದಿಗೂ ಪೂಜನೀಯ ಸ್ಥಾನದಲ್ಲಿವೆ. ವಾಲ್ಮೀಕಿ ರಚಿತ ರಾಮಾಯಣ ಶ್ರೀರಾಮ , ಸೀತಾಮಾತೆಯ ಆದರ್ಶಮಯ ಬದುಕು ಜನರಿಗೆ ಪ್ರೇರಣೆ ನೀಡಿದೆ. ದುಷ್ಟತನಕ್ಕೆ ಶಿಕ್ಷೆ, ಶಿಷ್ಟರ ರಕ್ಷಣೆ ಸಂದೇಶ ರವಾನೆಯಾಗಿದ್ದು, ಎಲ್ಲರೂ ಮಹರ್ಷಿ ವಾಲ್ಮೀಕಿ ರಚಿತ ರಾಮಾಯಣದಲ್ಲಿ ಬದುಕಿನ ಸಂದೇಶಗಳನ್ನು ಅನುಸರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಶಿವಮೂರ್ತಿ ಮಾತನಾಡಿದರು. ನಗರಸಭೆ ಅಧ್ಯಕ್ಷ ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್, ವಾಲ್ಮೀಕಿ ಸಮಾಜದ ಮುಖಂಡರಾದ ಬಸವರಾಜು, ಹನುಮಪ್ಪ, ಪೌರಾಯುಕ್ತ ಕೃಷ್ಣಮೂರ್ತಿ ಮತ್ತಿತರರಿದ್ದರು.