ಜಿಲ್ಲೆ

ಆಂಗ್ಲ ಭಾಷೆ ವ್ಯಾಮೋಹ ಸಲ್ಲದು

ಅವಿನಾಶ್ ಜೈನಹಳ್ಳಿ

ಮೈಸೂರು: ತಾಯಿ ಭಾಷೆಯಾದ ಕನ್ನಡವನ್ನು ಪ್ರೀತಿಸಿ, ಸಂತ ಶ್ರೇಷ್ಠರಾದ ಕನಕದಾಸರ ಆದರ್ಶವನ್ನು ಪಾಲಿಸಿ ಎಂದು ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕ್ಯಾತನಹಳ್ಳಿ ಎಚ್. ಪ್ರಕಾಶ್ ಕರೆ ನೀಡಿದರು.

ಕನ್ನಡ ಜಾನಪದ ಪರಿಷತ್ ವತಿಯಿಂದ ಕುವೆಂಪುನಗರದ ಎಂಎಎಸ್ ವಿಎಸ್ ಗುರುಕುಲ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಕರ್ನಾಟಕ ಸುವರ್ಣ ಜಾನಪದ ರಾಜ್ಯೋತ್ಸವ ಹಾಗೂ ಭಕ್ತ ಕನಕದಾಸರ 536ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ಯುವ ಜನಾಂಗ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಕನ್ನಡದ ಆಸಕ್ತಿ ತೋರಿಸುತ್ತಿಲ್ಲ. ಇದು ಸಲ್ಲದು. ಯಾವುದೇ ಭಾಷೆ ಇದ್ದರೂ ತಾಯಿ ಭಾಷೆಯಾದ ಕನ್ನಡವನ್ನು ಪ್ರೀತಿಸಬೇಕು. ಗಡಿ ಭಾಗದಲ್ಲಿ ಹಾಗೂ ಬೆಂಗಳೂರಿನಲ್ಲಿ ಪರಭಾಷಿಕರ ಹಾವಳಿ ಅತಿಯಾಗಿದೆ. ಹೀಗಿರುವಾಗ ಕನ್ನಡಿಗರಾದ ನಾವು ಕನ್ನಡವನ್ನು ಉಳಿಸಿ, ಬೆಳೆಸುವ ಕಡೆ ಗಮನಹರಿಸಬೇಕು ಎಂದು ಅವರು ಹೇಳಿದರು.

ಇದೇ ವೇಳೆ ಜಾನಪದ ಕಲಾವಿದೆ ಸುಮಾ ಪ್ರಶಾಂತ್, ಜಾನಪದ ಗಾಯಕರಾದ ಡಿ. ಶಂಕರ್, ಪುಷ್ಪಲತಾ ನಾರಾಯಣ, ಮಲಾರ ಗಣೇಶ್, ಜಾನಪದ ಸಂಘಟಕ ಜಿ. ಶ್ರೀಧರ್, ರಾಜ್ಯ ಮಟ್ಟದ ಅತ್ಯುತ್ತಮ ಎನ್ ಎಸ್ ಎಸ್ ಅಧಿಕಾರಿ ಪ್ರಶಸ್ತಿ ಪಡೆದಿರುವ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್‌ನ ಎಸ್.ಎಂ. ಮಧುಸೂದನ್ ಅವರನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಸನ್ಮಾನಿಸಿದರು.

ಪ್ರಾಂಶುಪಾಲ ಪಿ.ಡಿ. ಕನ್ನೀಕರ್, ಉಪ ಪ್ರಾಂಶುಪಾಲರಾದ ಬಿ.ಜಿ. ತನುಜಾ, ಕಜಪ ವಿಭಾಗೀಯ ಸಂಚಾಲಕಿ ಕಾವೇರಿ ಪ್ರಕಾಶ್, ಜಿಲ್ಲಾ ಜಂಟಿ ಕಾರ್ಯದರ್ಶಿ ಜಿ. ರವಿಶಂಕರ್, ರಾಣಿಪ್ರಭಾ, ಜಗದೀಶ್, ರೇವಣ್ಣ ಮೊದಲಾದವರು ಭಾಗವಹಿಸಿದ್ದರು.