ಕಡೂರು: ನನ್ನ ರಾಜಕೀಯ ಬೆಳವಣಿಗೆಯಲ್ಲಿ ಕಂಸಾಗರ ಗ್ರಾಮಸ್ಥರ ಪ್ರೋತ್ಸಾಹ ಅನನ್ಯ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಕಂಸಾಗರ ಗ್ರಾಮದಲ್ಲಿ ಗುರುವಾರ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಜಕೀಯ ಹಿನ್ನೆಲೆಯಿಲ್ಲದ ನನ್ನಂಥ ಸಾಮಾನ್ಯ ರೈತ ಕುಟುಂಬದವನನ್ನು ಪಕ್ಷೇತರನಾಗಿ ಪುರಸಭೆಗೆ ಆಯ್ಕೆ ಮಾಡಿದ್ದರಲ್ಲಿ ಕಂಸಾಗರ ಗ್ರಾಮದ ಸ್ನೇಹಬಳಗದ ಪ್ರೀತಿ ಹೆಚ್ಚಿನದಾಗಿತ್ತು ಎಂದರು.
ಎಲ್ಲರ ವಿಶ್ವಾಸ, ಪ್ರೀತಿ ಗಳಿಸಿದ್ದರ ಲವಾಗಿ ನಾಲ್ಕನೇ ಬಾರಿಗೆ ಅಧ್ಯಕ್ಷನಾಗಿದ್ದೇನೆ. ಅಭಿವೃದ್ಧಿ ಕಾರ್ಯಕ್ಕೆ ಸಮಯ ಮೀಸಲಿಟ್ಟು ನನ್ನ ಇತಿಮಿತಿಯಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತೇನೆ. ಕಂಸಾಗರ ಗ್ರಾಮಕ್ಕೂ ಪಟ್ಟಣಕ್ಕೂ ಇತಿಹಾಸದಿಂದಲೂ ಅವಿನಾಭಾವ ಸಂಬಂಧವಿದೆ. ಗ್ರಾಮದ ಎಲ್ಲ ಸಮುದಾಯಗಳಲ್ಲಿ ಒಗ್ಗಟ್ಟು ಆರೋಗ್ಯಕರ ಬೆಳವಣಿಗೆಗೆ ಸಾಕ್ಷಿ ಎಂದರು.
ಪುರಸಭೆ ಅಧ್ಯಕ್ಷನಾಗಲು ತಾಪಂ ಮಾಜಿ ಅಧ್ಯಕ್ಷ ಸಿಗೇಹಡ್ಲು ಹರೀಶ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದಕ್ಕೆ ಪೂರಕವಾಗಿ ಪುರಸಭೆ ಸದಸ್ಯರ ಬೆಂಬಲವೂ ಹೆಚ್ಚಾಗಿತ್ತು. ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಶಾಸಕರೊಡನೆ ಕೈಜೋಡಿಸಲಾಗುವುದು ಎಂದು ತಿಳಿಸಿದರು.
ಪ್ರದೇಶ ಕುರುಬರ ಸಂಘದ ನಿರ್ದೇಶಕ ಲೋಕೇಶಪ್ಪ , ಪುರಸಭೆ ಸದಸ್ಯ ಮರುಗುದ್ದಿ ಮನು, ಮುಖಂಡರಾದ ಸೀಗೆಹಡ್ಲು ಹರೀಶ್, ಯರದಕೆರೆ ರಾಜಪ್ಪ, ತಿಪ್ಪೇಶ್, ಕಂಸಾಗರ ರೇವಣ್ಣ, ಪರಮೇಶ್ವರಪ್ಪ, ಗೋಪಿನಾಥ್, ಪ್ರದೀಪ್, ಕಂಸಾಗರ ಶೇಖರ್, ಡಿಶ್ ಮಂಜುನಾಥ್, ಪುಟ್ಟಸ್ವಾಮಿ, ಹರೀಶ್, ರಾಜೇಶ್, ತ್ಯಾಗರಾಜ್, ತಮ್ಮಯ್ಯ, ಚಂದ್ರನಾಯ್ಕ ಇತರರಿದ್ದರು.