ಜಿಲ್ಲೆ

ವಿದ್ಯುತ್ ತಂತಿ ಬಿದ್ದು, ಕಬ್ಬು ಬೆಂಕಿಗಾಹುತಿ

ಮದ್ದೂರು: ಪಟ್ಟಣದ ಹಳೇ ಒಕ್ಕಲಿಗರ ಬೀದಿಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯಿಂದ ಜಮೀನಿಗೆ ಬೆಂಕಿ ತಗುಲಿ ಕಬ್ಬಿನ ಫಸಲು ಮತ್ತು ತೆಂಗಿನ ಮರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಶನಿವಾರ ನಡೆದಿದೆ.

ಪಟ್ಟಣದ ಸರ್ವೆ ಅಂಕಯ್ಯ ಅವರ ಪುತ್ರ ಎಂ.ಎ.ಸುರೇಶ್ ಎಂಬುವರಿಗೆ ಸೇರಿದ್ದ ಕಬ್ಬಿನ ಫಸಲು ಮತ್ತು ತೆಂಗಿನ ಮರಗಳಿಗೆ ಬೆಂಕಿ ತಗುಲಿದೆ.
ಮಧ್ಯಾಹ್ನ 12.30 ರ ಸಮಯದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ 1ಎಕರೆ ಜಾಗದಲ್ಲಿ ಬೆಳೆದಿದ್ದ ಕಬ್ಬಿನ ಫಸಲು ಮತ್ತು 35ತೆಂಗಿನ ಮರಗಳು ಬೆಂಕಿಗೆ ಆಹುತಿಯಾಗಿ ಅಂದಾಜು 1ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಸುರೇಶ್ ಹೇಳಿದ್ದಾರೆ.

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಇಂತಹ ಅವಘಡಗಳು ಸಂಭವಿಸುತ್ತಿದ್ದು, ಸೆಸ್ಕ್ ಅಧಿಕಾರಿಗಳ ನಿರ್ಲಕ್ಷೃ ಇದಕ್ಕೆ ಕಾರಣ ಎಂದು ಮುಖಂಡ ಗುರುಸ್ವಾಮಿ ಆರೋಪಿಸಿದ್ದಾರೆ. ಮುಂದೆ ಇಂತಹ ಘಟನೆಗಳು ಸಂಭವಿಸಿದಲ್ಲಿ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.