ಚಳ್ಳಕೆರೆ: ತಾಲೂಕಿನ ಬೂದಿಹಳ್ಳಿ ಗ್ರಾಮದ ಜಮೀನೊಂದರಲ್ಲಿ ವಿದ್ಯುತ್ ಕಂಬ ಸಂಪೂರ್ಣ ಶಿಥಿಲಗೊಂಡಿದ್ದು, ಕಂಬ ಬದಲಾಯಿಸುವಂತೆ ರೈತರು ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಬೆಸ್ಕಾಂ ಅಧಿಕಾರಿಗಳು ಸ್ಪಂದಿಸಿಲ್ಲ. ಏನಾದ್ರೂ ಅನಾಹುತ ಸಂಭವಿಸಿದರೆ ಇಲಾಖೆಯೇ ಹೊಣೆ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ಮಳೆ-ಗಾಳಿ ರಭಸಕ್ಕೆ ವಿದ್ಯುತ್ ಕಂಬ ಕೆಳಗೆ ಬೀಳಲಾಗಿತ್ತು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿಗಾ ವಹಿಸಲಿಲ್ಲ. ಸ್ಥಳೀಯ ರೈತರು ಗೈ ವೈರ್ ಕಟ್ಟಿಕೊಂಡು ಕಂಬವನ್ನು ನಿಲ್ಲಿಸಿದ್ದಾರೆ.
ಈ ಕಂಬದಿಂದ ಎಂಟು ಕೃಷಿ ಪಂಪ್‌ಸೆಟ್‌ಗಳು ವಿದ್ಯುತ್ ಸಂಪರ್ಕ ಪಡೆದಿದ್ದು, ಮಳೆ-ಗಾಳಿಗೆ ಬಿದ್ದು ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚು ಇದೆ. ಆದ್ದರಿಂದ ತುರ್ತಾಗಿ ಅಧಿಕಾರಿಗಳು ಕಂಬ ಬದಲಾಯಿಸಬೇಕು ಎಂದು ರೈತರಾದ ಬೂದಪ್ಪ, ರಾಜು ಬೂದಿಹಳ್ಳಿ, ಈರಣ್ಣ, ರವಿ, ರಂಗಪ್ಪ, ನಾಗರಾಜ ಇತರರು ಆಗ್ರಹಿಸಿದ್ದಾರೆ.