ಮಹಾಲಿಂಗಪುರ: ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದರೂ ದೇಶದಲ್ಲಿ ಹಿನ್ನಡೆ ಅನುಭವಿಸಿದ್ದರಿಂದ ಪಕ್ಷದ ಸ್ಥಳೀಯ ನಾಯಕರಿಗೆ ಈ ಚುನಾವಣೆ ಒಂದು ಕಡೆ ಬೇವು ಇನ್ನೊಂದು ಕಡೆ ಬೆಲ್ಲ ಸವಿದ ಅನುಭವ ನೀಡಿತು. ಹಿರಿಯ ನಾಯಕರಾರೂ ಕ್ಷೇತ್ರದಲ್ಲಿ ವಿಜಯೋತ್ಸವ ಆಚರಿಸುವ ಗೋಜಿಗೆ ಹೋಗಲಿಲ್ಲ. ಕೆಲವು ಕಾರ್ಯಕರ್ತರು ಮಾತ್ರ ಗುಲಾಲು ಎರಚಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು. ಬಸು ಮಡಿವಾಳ, ಮಹೇಶ ಜಿಡ್ಡಿಮನಿ, ಭೈರೇಶ ಆದೆಪ್ಪನವರ, ಈರಪ್ಪ ಕಾಲತಿಪ್ಪಿ ಇದ್ದರು.
ಬಿಜೆಪಿ ಮುಖಂಡರಾದ ಜಿ.ಎಸ್.ಗೊಂಬಿ ಹಾಗೂ ರವಿ ಜವಳಗಿ ಮಾತನಾಡಿ, ದೇಶದಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿದ್ದು ದುಃಖಕರ ಸಂಗತಿ. ಇಂದು ಮತದಾರರು ದೇಶದ ಅಭಿವೃದ್ಧಿಗಿಂತ ಸ್ವಹಿತಾಸಕ್ತಿ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದರು. ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕರ್ತರ ಪರಿಸ್ಥಿತಿ ಕೂಡ ಭಿನ್ನವಾಗಿರಲಿಲ್ಲ.
ದೇಶದಲ್ಲಿ ಕಾಂಗ್ರೆಸ್ ಹಿಂದಿಗಿಂತಲೂ ಉತ್ತಮ ಸಾಧನೆ ಮಾಡಿದ್ದರೂ ಮತಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರಿಂದ ಕಾಂಗ್ರೆಸ್ ನಾಯಕರು ಕೂಡ ಮೌನವಾಗಿ ಉಳಿದರು. ಪತ್ರಿಕೆಯೊಂದಿಗೆ ಮತನಾಡಿದ ಸ್ಥಳೀಯ ನಗರ ಘಟಕದ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಚಮಕೇರಿ, ನಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ದೊರೆಯಬೇಕಿತ್ತು. ಹಲವು ಪಕ್ಷಗಳ ಸಹಕಾರದೊಂದಿಗೆ ಕಾಂಗ್ರೆಸ್ ಕೂಡ ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ ಎಂದರು.