ಮಹಾಲಿಂಗಪುರ: ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಪ್ರಭಾವಿ ಜ್ಯೋತಿರ್ಲಿಂಗವಿರುವ ಸುಕ್ಷೇತ್ರ ಶ್ರೀಶೈಲದೆಡೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಇಲ್ಲಿಯ ಕಂಬಿ ಮಲ್ಲಯ್ಯನ ಪ್ರಯಾಣಕ್ಕೆ ಚಾಲನೆ ನೀಡಲಾಯಿತು.
ಇಲ್ಲಿಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಿತಗೊಂಡ ಮಲ್ಲಯ್ಯನೊಂದಿಗೆ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ರನ್ನಬೆಳಗಲಿ ರಸ್ತೆಯಲ್ಲಿರುವ ಕೆನಾಲ್ ವರೆಗೆ ಬಸವಣ್ಣ (ಹೋರಿ), ಸಕಲ ಭಕ್ತವೃಂದ ಹಾಗೂ ವಾದ್ಯಮೇಳಗಳೊಂದಿಗೆ ನಡಿಗೆಯಲ್ಲಿ ಸಾಗಿದರು.
ಮಾರ್ಗದುದ್ದಕ್ಕೂ ಸಾಲಾಗಿ ನಿಂತ ಮುತ್ತೈದೆಯರು ತುಂಬಿದ ಕೊಡದಿಂದ ನೀರು ಸುರಿದು ಆಶೀರ್ವಾದ ಪಡೆದರು. ಕೆನಾಲ್ ಹತ್ತಿರ ಮಲ್ಲಯ್ಯನಿಗೆ ಪೂಜೆ ಸಲ್ಲಿಸಿ ಮಂಗಳಾರತಿ ಸಲ್ಲಿಸಲಾಯಿತು.
ಮಹಾಲಿಂಗಪುರದಿಂದ ರನ್ನಬೆಳಗಲಿ, ಮುಗಳಖೋಡದಿಂದ ಮುಧೋಳ ಪಟ್ಟಣದವರೆಗೆ ಮಲ್ಲಯ್ಯನ ಭಕ್ತರು ಪಾದಯಾತ್ರೆ ಮೂಲಕ ತೆರಳಿ ಯಾತ್ರಿಕರನ್ನು ಬೀಳ್ಕೊಟ್ಟರು.
ಪಟ್ಟಣದಿಂದ ರನ್ನಬೆಳಗಲಿಯವರೆಗೆ ಜನಸಗರ ಸೇರಿತ್ತು. ರನ್ನಬೆಳಗಲಿಯಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಮಾರ್ಗಮಧ್ಯ ಯಾತ್ರಿಕರಿಗೆ ಅನೇಕರು ಉಪ್ಪಿಟ್ಟು, ತಂಪು ಪಾನೀಯ, ಚಹಾ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.
ಸದ್ಭಕ್ತರಾದ ಡಾ.ಉಷಾ ಬೆಳಗಲಿ, ಮಲ್ಲು ಕುಳ್ಳೋಳ್ಳಿ, ವಿಜಯಕುಮಾರ ಕುಳ್ಳೋಳ್ಳಿ, ಬಾಳಕೃಷ್ಣ ಮಾಳವದೆ, ಚಂದ್ರು ಗೊಂದಿ, ಪ್ರಕಾಶ ಬಾಡನವರ, ಬಸವರಾಜ ಕಬ್ಬೂರ, ಮಲ್ಲಿಕಾರ್ಜುನ ಮನ್ನಯ್ಯನವರಮಠ, ಶ್ರೀಶೈಲ ಮಠದ, ಸಿದ್ದಯ್ಯ ಮಠದ, ಮಹಾಲಿಂಗಪ್ಪ ಲಾತೂರ ಮುಂತಾದವರು ಇದ್ದರು.