The efforts of the sages for the progress of humanity are immense. 
ಜಿಲ್ಲೆ

ಮನುಕುಲದ ಏಳಿಗೆಗೆ ಶ್ರೀಗಳ ಶ್ರಮ ಅಪಾರ

ರಬಕವಿ/ಬನಹಟ್ಟಿ: ಸರ್ವ ಮಾನವ ಕುಲಕ್ಕೆ ಜಯವಾಗಲಿ ಎಂದ ರೇಣುಕಾಚಾರ್ಯರು ಮನುಕುಲದ ಏಳಿಗೆಗೆ ಶ್ರಮಿಸಿದ್ದಾರೆ ಎಂದು ಬನಹಟ್ಟಿ ಹಿರೇಮಠದ ಶ್ರೀ ಶರಣಬಸವ ಶಿವಾಚಾರ್ಯರು ಹೇಳಿದರು.

ರಬಕವಿ-ಬನಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗದ್ಗುರು ರೇಣುಕಾಚಾರ್ಯರ ತತ್ವ, ಬದುಕಿನ ಚರಿತ್ರೆ, ಧಾರ್ಮಿಕ ಸಾಧನೆಗಳು, ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಪಡೆದಿವೆ. ಕನ್ನಡ ಭಾಷೆಯಲ್ಲಿ ಅವರ ಬದುಕು ಮತ್ತು ತತ್ವಗಳನ್ನು ವಿವರಿಸುವ ಹಲವು ಪುರಾಣ ಗ್ರಂಥಗಳಿವೆ. ಇಂದಿನ ಯುವ ಪೀಳಿಗೆ ಅವರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಚಿಮ್ಮಡ ವಿರಕ್ತಮಠದ ಪ್ರಭುದೇವರು ಮಾತನಾಡಿ, ರೇಣುಕಾಚಾರ್ಯರು ಆಂಧ್ರ ಪ್ರದೇಶದ ಕದ್ರಿಕಿ ಎಂಬ ಸ್ಥಳದಲ್ಲಿ ಜನಿಸಿದರು ಎಂದು ಇತಿಹಾಸದಲ್ಲಿ ನೋಡುತ್ತೇವೆ. ಕೆಲವೊಂದು ಕಾದಂಬರಿಗಳು ಅವರನ್ನು ಪರಮಶಿವನ ಅವತಾರ ಎಂದು ಗುರುತಿಸುತ್ತವೆ. ರೇಣುಕಾಚಾರ್ಯರು ಬಾಲ್ಯದಲ್ಲಿಯೇ ಭಕ್ತಿಯಿಂದ ಪರಿಪೂರ್ಣರಾಗಿದ್ದು, ಋಷಿಗಳ ಜೊತೆಯಲ್ಲಿ ನಿರಂತರ ಜ್ಞಾನಸಾಧನೆ ನಡೆಸಿ, ಶೈವ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಿದ ಮಹಾನ್ ತಪಸ್ವಿಗಳಾಗಿದ್ದಾರೆ ಎಂದರು.

ತಹಸೀಲ್ದಾರ್ ಗಿರೀಶ ಸ್ವಾದಿ, ರಬಕವಿ ಜಂಗಮ ಸಮಾಜದ ಅಧ್ಯಕ್ಷ ಜಿ.ಎಸ್. ಅಮ್ಮಣಗಿಮಠ ಮಾತನಾಡಿದರು.

ಶಂಕರಯ್ಯ ಕಾಡದೇವರ, ರಾಜಶೇಖರ ಹಿರೇಮಠ, ಸಂಜಯ ಅಮ್ಮಣಗಿಮಠ, ವಿವೇಕ ಹಿರೇಮಠ, ಮಹಾದೇವಯ್ಯ ನಂದಯ್ಯಗೋಳ, ದಯಾನಂದ ಬಾಗಲಕೋಟಮಠ, ಬಸಯ್ಯ ಅಮ್ಮಣಗಿಮಠ ಮತ್ತಿತರರಿದ್ದರು.