ನಾಗಮಂಗಲ: ಉಳುಮೆ ಮಾಡುವುದಷ್ಟೇ ರೈತನ ಕೆಲಸವಾಗಬಾರದು. ಜತೆಗೆ ಉದ್ದಿಮೆ ಆರಂಭಿಸಿ ಯಶ ಕಾಣಬಹುದು ಎಂಬುದನ್ನು ಇಲ್ಲೊಬ್ಬ ರೈತ ಸಾಧಿಸಿ ತೋರಿಸಿದ್ದಾರೆ.
ಎರೆಹುಳು ಗೊಬ್ಬರದ ಘಟಕ ಸ್ಥಾಪಿಸಿ ಲಕ್ಷಾಂತರ ರೂ. ಆದಾಯ ಗಳಿಸುವ ಮೂಲಕ ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಇತರ ಜಿಲ್ಲೆಗಳಿಗೂ ಎರೆಹುಳು ಗೊಬ್ಬರ ಮಾರಾಟ ಮಾಡುತ್ತಿರುವ ಸಾವಯವ ರೈತ ನರಸಿಂಹಮೂರ್ತಿ ಇತರರಿಗೆ ಮಾದರಿಯಾಗಿದ್ದಾರೆ.
ತಾಲೂಕಿನ ನರಗಲು ಗ್ರಾಮದ ನಿವಾಸಿಯಾಗಿರುವ ಅವರು ಸ್ಥಳೀಯ ಗ್ರಾಮ ಪಂಚಾಯಿತಿಯ ನೌಕರ. ಸರ್ಕಾರಿ ಕೆಲಸದ ನಂತರದ ಹಾಗೂ ರಜಾ ದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎರೆಹುಳು ಗೊಬ್ಬರ ಘಟಕ ಸ್ಥಾಪನೆ, ಮೀನು ಸಾಕಣೆಗೂ ಮೊದಲು ತಮ್ಮ ಜಮೀನಿನಲ್ಲಿ ವಿವಿಧ ಬಗೆಯ ತರಕಾರಿ ಬೆಳೆಗಳನ್ನು ಬೆಳೆದು ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸಿದ್ದರು. ತದನಂತರ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಮಾಹಿತಿ ಆಧರಿಸಿ ಎರೆಹುಳು ಘಟಕ ಮತ್ತು ಮೀನು ಸಾಕಣೆಗೆ ಮುಂದಾಗಿ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.
ರೈತ ನರಸಿಂಹಮೂರ್ತಿಗೆ 3 ಎಕರೆ ಜಮೀನಿದ್ದು 2 ಕೊಳವೆಬಾವಿ ಹೊಂದಿದ್ದಾರೆ. ಮೂರು ಎಕರೆ ಜಮೀನಿನಲ್ಲಿಯೇ ವಿವಿಧ ಬಗೆಯ ಕೃಷಿ ಮಾಡುವ ಮೂಲಕ ಕೃಷಿಯಲ್ಲಿಯೂ ಉದ್ಯಮ ಮಾಡಿ ಆದಾಯ ಗಳಿಸಬಹುದು ಎಂಬುದನ್ನು ಕಂಡುಕೊಂಡಿದ್ದಾರೆ.
ರಸಗೊಬ್ಬರ ಬಳಕೆ ಇಲ್ಲ: ರೈತ ನರಸಿಂಹಮೂರ್ತಿ ಜಮೀನಿಗೆ ಯಾವುದೇ ರೀತಿಯ ರಸಗೊಬ್ಬರ ಬಳಕೆ ಮಾಡುವುದಿಲ್ಲ. ಜಮೀನಿನಲ್ಲಿ ಬೀಳುವ ತೆಂಗಿನಗರಿ, ಕಾಯಿಸಿಪ್ಪೆ, ಇತರ ರೀತಿಯ ಕಸದ ರೂಪದ ವಸ್ತುಗಳನ್ನು ಶೇಖರಿಸಿ ಅದನ್ನು ಕೊಳೆಸಿ ನಂತರ ಎರೆಹುಳು ಗೊಬ್ಬರವನ್ನಾಗಿಸಿ ತಯಾರಿಸುತ್ತಿದ್ದಾರೆ. ಎರೆಹುಳು ಘಟಕದಲ್ಲಿ ಗೊಬ್ಬರವನ್ನು ವಿಂಗಡಿಸಿ ಶುದ್ಧೀಕರಿಸಿದ ನಂತರ ಪ್ಯಾಕಿಂಗ್ ಮಾಡಿ ಟನ್‌ಗಟ್ಟಲೇ ಎರೆಹುಳು ಗೊಬ್ಬರವನ್ನು ಮಾರಾಟ ಮಾಡುತ್ತಿದ್ದಾರೆ. ನರಸಿಂಹಮೂರ್ತಿ ಅವರ ಎರೆಹುಳು ಗೊಬ್ಬರಕ್ಕೆ ತಾಲೂಕು ಮಾತ್ರವಲ್ಲದೆ ವಿವಿಧೆಡೆ ಹೆಸರಿದೆ.
ಮೀನು ಸಾಕಣೆಯಲ್ಲೂ ಯಶಸ್ಸು: ಎರೆಹುಳು ಘಟಕದ ಪಕ್ಕದಲ್ಲಿಯೇ 20 ಗುಂಟೆ ಜಾಗದಲ್ಲಿ ಮೀನು ಸಾಕಣೆ ಮಾಡುತ್ತಿದ್ದಾರೆ. ಇದಕ್ಕಾಗಿ ಒಂದು ಘಟಕ ಸ್ಥಾಪಿಸಿಕೊಂಡಿದ್ದು, ಅಲ್ಲಿ 8 ತೊಂಬೆ ನಿರ್ಮಿಸಿ ತಿಲಾಪಿಯಾಪೈಲಟ್ ಎಂಬ ತಳಿಯ ಮೀನುಗಳನ್ನು ಸಾಕುತ್ತಿದ್ದಾರೆ. ಜತೆಗೆ ಕೃಷಿ ಹೊಂಡದಲ್ಲಿಯೂ ಮೀನು ಸಾಕಣೆ ಮಾಡುತ್ತಿದ್ದಾರೆ. ಸುಮಾರು 8 ಸಾವಿರಕ್ಕೂ ಅಧಿಕ ಮೀನು ಮರಿಗಳಿದ್ದು, ಈಗಾಗಲೇ ಪ್ರತಿ ಮೀನು 2 ರಿಂದ 3 ಕೆಜಿ ತೂಕದಷ್ಟಿದೆ. ಸುಮಾರು 8 ಲಕ್ಷ ರೂ. ಬಂಡವಾಳ ಹಾಕಿದ್ದಾರೆ. ಆ ಮೂಲಕ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ.
ಸಮಗ್ರ ಕೃಷಿಗೆ ಒತ್ತು: ತರಕಾರಿ ಬೆಳೆಗೆ ಸೀಮಿತವಾಗಿದ್ದ ರೈತ ನರಸಿಂಹಮೂರ್ತಿ ನಷ್ಟ ಅನುಭವಿಸಿದ ನಂತರ ತರಕಾರಿ ಬೆಳೆಗೆ ವಿದಾಯ ಹೇಳಿ ಸಮಗ್ರ ಕೃಷಿಯತ್ತ ಮುಖ ಮಾಡಿದರು. 200 ಶ್ರೀಗಂಧ, 200 ತೇಗ, ಸಪೋಟ, ಹಲಸು, ಮಾವು, ನುಗ್ಗೆ, ನಿಂಬೆ, 200 ತೆಂಗು ಬೆಳೆಯುವ ಮೂಲಕ ಸಮಗ್ರ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
ಸ್ಥಳೀಯವಾಗಿ ಮಾರುಕಟ್ಟೆ ಸೃಷ್ಟಿ: ಎರೆಹುಳು ಗೊಬ್ಬರ ಘಟಕ ಸ್ಥಾಪಿಸಿದ ಬಳಿಕ 30 ಟನ್‌ಗೂ ಹೆಚ್ಚು ಗೊಬ್ಬರ ಮಾರಾಟ ಮಾಡಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ಭದ್ರಾವತಿ, ದಾವಣಗೆರೆ, ಉಡುಪಿ, ಕುಂದಾಪುರ ಸೇರಿದಂತೆ ಮುಂತಾದ ಕಡೆಗಳಿಂದ ರೈತರು ಬಂದು ಟನ್‌ಗಟ್ಟಲೇ ಗೊಬ್ಬರ ಖರೀದಿಸಿದ್ದಾರೆ. ಜಮೀನಿಗೆ ಬಂದು ಗೊಬ್ಬರ ಖರೀದಿ ಮಾಡುತ್ತಿರುವುದರಿಂದ ನರಸಿಂಹಮೂರ್ತಿಗೆ ಮಾರುಕಟ್ಟೆ ಸಮಸ್ಯೆಯೇ ಇಲ್ಲವಾಗಿದೆ. ಪ್ರತಿ ಕೆಜಿಗೆ 10 ರೂ.ನಂತೆ ಎರೆಹುಳು ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಇದರೊಂದಿಗೆ ಕೆಜಿ ಮೀನಿಗೆ 100 ರೂ. ದರ ನಿಗದಿ ಮಾಡಿದ್ದಾರೆ.
50ಕ್ಕೂ ಹೆಚ್ಚು ಕಡೆ ತರಬೇತಿ: ಎರೆಹುಳು ಗೊಬ್ಬರ ಮತ್ತು ಮೀನು ಸಾಕಣೆಯಲ್ಲಿ ಯಶಸ್ವಿಯಾಗಿರುವುದನ್ನು ಕಂಡು ಕೆಲವು ಸಂಘ-ಸಂಸ್ಥೆಗಳು ತಾಲೂಕಿನ 50ಕ್ಕೂ ಹೆಚ್ಚು ಕಡೆಗಳಲ್ಲಿ ರೈತರಿಗೆ ತರಬೇತಿ ಶಿಬಿರ ಆಯೋಜಿಸಿ ರೈತ ನರಸಿಂಹಮೂರ್ತಿ ಅವರನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿ ಕರೆಸಿದ್ದಾರೆ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಾವಯವ ಕೃಷಿ ಮತ್ತು ಎರೆಹುಳು ಗೊಬ್ಬರ ತಯಾರಿ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಿದ್ದಾರೆ. ಇವರಿಗೆ ನಾಗಮಂಗಲ ತಾಲೂಕು ಆಡಳಿತ ಕೃಷಿ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ತರಕಾರಿ ಬೆಳೆಯಲ್ಲಿ ಅಪಾರ ನಷ್ಟ ಅನುಭವಿಸಿದ ನಂತರ ಸಣ್ಣ ಪ್ರಮಾಣದಲ್ಲಿ ಎರೆಹುಳು ಗೊಬ್ಬರದ ಘಟಕ ಆರಂಭಿಸಿದೆ. ಆದರೆ ಈಗ ಅದು ದೊಡ್ಡ ಮಟ್ಟದಲ್ಲಿ ಬೆಳೆದಿದ್ದು ಟನ್ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದೇನೆ. ಇದರ ಜತೆಗೆ ಮೀನು ಸಾಕಣೆ ನನ್ನ ಕೈಹಿಡಿದಿದೆ. ಇವೆರಡನ್ನು ಜೀವ ಇರುವವರೆಗೂ ಮುಂದುವರಿಸಿಕೊಂಡು ಹೋಗುತ್ತೇನೆ. ಕಾರ್ಮಿಕರಿಲ್ಲದೆ, ಖರ್ಚಿಲ್ಲದೆ ಎರೆಹುಳು ಗೊಬ್ಬರ ತಯಾರಿಸುತ್ತಿದ್ದೇನೆ. ರೈತರಿಗೆ ಸಾವಯವ ಗೊಬ್ಬರದ ಬಗ್ಗೆ ಅರಿವಿನ ಅಗತ್ಯವಿದ್ದು ಸಂಬಂಧಪಟ್ಟ ಇಲಾಖೆಗಳು ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಬೇಕಿದೆ.
ನರಸಿಂಹಮೂರ್ತಿ ರೈತ