ಜಿಲ್ಲೆ

ಮೈಸೂರನಲ್ಲಿ ನನಸಾಗಲಿದೆ ‘ಚಿತ್ರನಗರಿ’ ಕನಸು

ಆರ್.ಕೃಷ್ಣ ಮೈಸೂರು

ಮೈಸೂರಿನಲ್ಲಿ ‘ಚಿತ್ರನಗರಿ’(ಫಿಲ್ಮ್ ಸಿಟಿ) ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿರುವುದರಿಂದ ಚಿತ್ರೋದ್ಯಮಿಗಳ ಬಹುವರ್ಷದ ಕನಸಿಗೆ ಈಗ ಕಾಲ ಕೂಡಿ ಬಂದಂತಾಗಿದೆ.

ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಚಿತ್ರನಗರಿ ನಿರ್ಮಿಸಲು ಭೂ ಸ್ವಾಧೀನಪಡಿಸಿಕೊಂಡು ಹತ್ತು ವರ್ಷ ಕಳೆದರೂ ನಿರ್ಮಾಣ ಕಾರ್ಯ ಕುಂಟುತ್ತಲೇ ಸಾಗಿದೆ. ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಸಕ್ತಿಯ ಫಲವಾಗಿ ಚಿತ್ರನಗರಿ ಭೂಮಿ ಹಸ್ತಾಂತರ ಪ್ರಕ್ರಿಯೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದರೂ ಚಾಲನೆ ದೊರೆತಿರಲಿಲ್ಲ.

ಜಿಲ್ಲೆಯ ಅಭಿವೃದ್ಧಿ ಕುರಿತು ಬೆಂಗಳೂರಿನಲ್ಲಿ ಆಯೋಜಿಸಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಶೀಘ್ರವೇ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದರಿಂದ ವೇಗ ದೊರೆಯುವ ಲಕ್ಷಣ ಕಂಡುಬಂದಿದೆ.

ನೆರೆಯ ಹೈದರಾಬಾದ್‌ನಲ್ಲಿ ಇರುವ ದೊಡ್ಡ ಸಿಟಿ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಚಿತ್ರನಗರಿ ಆಗಬೇಕು ಎಂದು ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಸೇರಿದಂತೆ ಅನೇಕ ನಟರು, ನಿರ್ಮಾಪಕ, ನಿರ್ದೇಶಕರು ಕನಸು ಕಂಡಿದ್ದರು. ಅಲ್ಲದೇ ಮೈಸೂರಿನಲ್ಲಿ ಚಿತ್ರನಗರಿ ಸೂಕ್ತ ಎನ್ನುವ ಅಭಿಪ್ರಾಯವನ್ನು ಮುಂದಿಟ್ಟಿದ್ದರು.

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ಮೈಸೂರು ಜಿಲ್ಲೆಯಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಲಾಗುವುದೆಂದು ಘೋಷಣೆ ಮಾಡಿದ್ದರು. ಬಿಜೆಪಿ ಸರ್ಕಾರ 2020-21ನೇ ಸಾಲಿನ ಬಜೆಟ್‌ನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಫಿಲಂ ಸಿಟಿ ನಿರ್ಮಿಸುವುದಾಗಿ ಘೋಷಣೆ ಮಾಡಿತ್ತು. ತದನಂತರ ನನೆಗುದಿಗೆ ಬಿದ್ದಿತು.

ಚಿತ್ರನಗರಿ ನಿರ್ಮಾಣಕ್ಕೆ ಈಗಾಗಲೇ ಗುರುತಿಸಿರುವ 110 ಎಕರೆ ಭೂಮಿ ಜತೆಗೆ ಹೆಚ್ಚುವರಿಯಾಗಿ ಎರಡನೇ ಹಂತದ ವಿಸ್ತರಣೆಗೆ 50 ಎಕರೆ ಗುರುತಿಸಲಾಗುತ್ತಿದೆ. 2015-16ರ ಆಯವ್ಯಯದಲ್ಲಿಯೇ ಚಿತ್ರನಗರಿ ಘೋಷಣೆ ಮಾಡಲಾಗಿತ್ತಾದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಟ್ರಾನ್ಸಾಕ್ಷನ್ ಅಡ್ವೈಸರ್ ನೇಮಕ ಮಾಡಲು ಟೆಂಡರ್ ಕರೆಯಬೇಕು. ಭೂಮಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಹಸ್ತಾಂತರ ಮಾಡಿದ ನಂತರ ಎಕ್ಸ್‌ಪ್ರೆಷನ್ ಆಫ್ ಇಂಟರೆಸ್ಟ್ ಕರೆಯಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಚಿತ್ರರಂಗಕ್ಕೆ ಅಗತ್ಯವಿರುವ ತಂತ್ರಜ್ಞಾನಗಳನ್ನೊಳಗೊಂಡ ಅತ್ಯಾಧುನಿಕ ಮಾದರಿಯ ಚಿತ್ರನಗರಿ ನಿರ್ಮಿಸಬೇಕು. ಚಿತ್ರನಗರಿಯಲ್ಲಿ ಥಿಯೇಟರ್, ಸ್ಟುಡಿಯೋ, ಮಲ್ಟಿಪ್ಲೆಕ್ಸ್, ಥೀಮ್ ಪಾರ್ಕ್, ಹೋಟೆಲ್ಗಳ ನಿರ್ಮಾಣವಾಗಲಿ. ಟ್ರಾನ್ಸಾಕ್ಷನ್ ಅಡ್ವೈಸರ್ ನೇಮಕವಾದ ನಂತರ ಚಿತ್ರರಂಗದ ಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಸಮಾಲೋಚನೆ ನಡೆಸಿ, ಚಿತ್ರನಗರಿಯ ರೂಪುರೇಷೆಗಳನ್ನು ಅಂತಿಮಗೊಳಿಸಬೇಕಿದೆ.

ಚಿತ್ರನಗರಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಹಿಂದೆ ಇದ್ದ ಚಿತ್ರನಗರಿ ಗರಿ, ಚಟುವಟಿಕೆ, ಭವ್ಯ ಪರಂಪರೆ ಮರಳಿ ಬಂದಂತಾಗುತ್ತದೆ. ಫಿಲಂ ಸಿಟಿ ಸ್ಥಾಪನೆ ಕನಸು ಕಂಡವರ ಆಸೆ ಈಡೇರಿದಂತಾಗುತ್ತದೆ. ನೂರು ವಸಂತಗಳ ಹತ್ತಿರಕ್ಕೆ ಹೋಗುತ್ತಿರುವ ಕನ್ನಡ ಚಿತ್ರರಂಗಕ್ಕೆ ತನ್ನದೇ ನೆಲದಲ್ಲಿ ಶಾಶ್ವತ ಚಿತ್ರನಗರಿ ಸ್ಥಾಪನೆಯಾದಂತಾಗುತ್ತದೆ.

ಚಿತ್ರ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ವರ್ಷಕ್ಕೆ ಸರಾಸರಿ ನಾನೂರು ಚಿತ್ರಗಳು ನಿರ್ಮಾಣವಾಗುತ್ತವೆ. ಬೆಂಗಳೂರಿನಲ್ಲಿ 1970ರಲ್ಲಿ ಫಿಲಂ ಸ್ಟುಡಿಯೋ ಬೆಳೆಯುವ ಹೊತ್ತಿಗೆ ಮೈಸೂರಿನಲ್ಲಿ ಚಿತ್ರೀಕರಣಗಳು ಹೆಚ್ಚಾಗಿದ್ದಲ್ಲದೇ ಪ್ರೀಮಿಯರ್ ಸ್ಟುಡಿಯೋ ದಕ್ಷಿಣ ಭಾರತದಲ್ಲಿ ಮನೆಮಾತಾಗಿತ್ತು. ಅನ್ಯಭಾಷೆಯ ಚಿತ್ರಗಳು ಕೆಲ ದಶಕಗಳ ಹಿಂದೆಯೇ ಸಂಪೂರ್ಣವಾಗಿ ಚಿತ್ರನಗರಿಯಲ್ಲೇ ತಯಾರಾಗಿ ಬೆಳ್ಳಿತೆರೆಗೆ ಬರುತ್ತಿದ್ದರೆ, ಕನ್ನಡ ಸಿನಿಮಾ ಕ್ಷೇತ್ರವೂ ಈಗಲೂ ಪ್ರತಿಯೊಂದಕ್ಕೂ ಅತ್ತಿಂದಿತ್ತ ಅಲೆಯುತ್ತಾ ಚಲನಚಿತ್ರಗಳನ್ನು ತಯಾರು ಮಾಡಬೇಕಾಗಿದೆ ಎನ್ನುವ ಕೊರಗಿತ್ತು.

ಕನ್ನಡ ಚಿತ್ರರಂಗಕ್ಕೆ ಚಿತ್ರನಗರಿ ಅವಶ್ಯಕತೆ ಇದೆ ಎನ್ನುವ ವಿಷಯವು ರಾಮಕೃಷ್ಣಹೆಗಡೆ ಮುಖ್ಯಮಂತ್ರಿಯಾಗಿದ್ದಾಗ 1980ರಲ್ಲೇ ಮುನ್ನೆಲೆಗೆ ಬಂದಿತ್ತು. ಬಳಿಕ 2004ರಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಮತ್ತೆ ಫಿಲಂ ಸಿಟಿ ನಿರ್ಮಾಣ ವಿಷಯಕ್ಕೆ ರೆಕ್ಕೆ ಮೂಡಿದರೂ ಆಸೆ ಈಡೇರಿರಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2017ರಲ್ಲಿ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಗೆ ಜಾಗ ಗುರುತಿಸಿತು. 2018ರಲ್ಲಿ ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದ ಎಚ್.ಡಿ.ಕುಮಾರಸ್ವಾಮಿ ಅದನ್ನು ರಾಮನಗರಕ್ಕೆ ಸ್ಥಳಾಂತರ ಮಾಡಿದರು.

2019ರಲಿ ್ಲಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಚಿತ್ರನಗರಿಯನ್ನು ಹೆಸರಘಟ್ಟದಲ್ಲಿ ಇರುವ ದೇವಿಕಾ ರಾಣಿ ರೋರಿಕ್ ಎಸ್ಟೇಟ್‌ನಲ್ಲಿ ಸ್ಥಾಪನೆ ಮಾಡಬೇಕು ಎನ್ನುವ ಆಶಯದೊಂದಿಗೆ 500 ಕೋಟಿ ರೂ. ಘೋಷಣೆ ಮಾಡಿತು. ಆದರೆ ಅಂತಿಮವಾಗಿ ಈಗ ಮೈಸೂರಿನ ಇಮ್ಮಾವಿಗೆ ಮತ್ತೆ ವಾಪಸ್ ಆಯಿತು.

------------

ಶೀಘ್ರ ನಿರ್ಮಾಣಗೊಳ್ಳಲಿ

ಚಿತ್ರನಗರಿ ಶೀಘ್ರ ನಿರ್ಮಾಣಗೊಳ್ಳುವ ಮೂಲಕ ಸೊರಗಿರುವ ಕನ್ನಡ ಚಿತ್ರರಂಗಕ್ಕೆ ವೇಗ ದೊರಕಿಸಿಕೊಡಬೇಕು. ಸಾಕಷ್ಟು ಬಾರಿ ಭೇಟಿ ಮಾಡಿ ಈ ಕುರಿತು ಮನವರಿಕೆ ಮಾಡಲಾಗಿದೆ. ಅದಕ್ಕಾಗಿ ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತಿದ್ದು, ಮುಖ್ಯಮಂತ್ರಿಗಳು ಆಸಕ್ತಿ ಹೊಂದಿದ್ದಾರೆ. ಮೈಸೂರಿನಲ್ಲಿ ಚಿತ್ರೀಕರಣಕ್ಕೆ ಸಾಕಷ್ಟು ತಾಣಗಳಿದ್ದು, ಚಿತ್ರನಗರಿಯಿಂದ ಶೋಭೆ ಹೆಚ್ಚಲಿದೆ.

ಎಸ್.ವಿ.ರಾಜೇಂದ್ರಸಿಂಗ್ ಬಾಬು

ಚಿತ್ರ ನಿರ್ದೇಶಕ, ನಿರ್ಮಾಪಕ