ಜಿಲ್ಲೆ

ಕೀರ್ತನೆಗೆ ತುಮಕೂರು ಜಿಲ್ಲೆ ಕೊಡುಗೆ ಅನನ್ಯ: ಪ್ರೊ.ಸಿದ್ದೇಗೌಡ

Tumakuru

ತುಮಕೂರು: ತುಮಕೂರು ಜಿಲ್ಲೆ ಸಂಗೀತ, ಸಾಹಿತ್ಯ, ಕಲೆಗೆ ಸಾಕಷ್ಟು ಕೊಡುಗೆ ನೀಡಿದ್ದು ಇಲ್ಲಿನ ಮಣ್ಣಿನಲ್ಲಿ ಪ್ರತಿಭೆಯ ಭಂಡಾರವಿದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಬಣ್ಣಿಸಿದರು.

ನಗರದ ಕನ್ನಡ ಭವನದಲ್ಲಿ ಶನಿವಾರ ರಾಜ್ಯಮಟ್ಟದ ಕಥಾಕೀರ್ತನಾಕಾರರ ಹಾಗೂ ಸಹವಾದ್ಯಗಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕಥಾಕೀರ್ತನೆಗೆ ಜಿಲ್ಲೆಯ ಸಾಕಷ್ಟು ಜನ ಸೇವೆ ಸಲ್ಲಿಸುತ್ತಿದ್ದಾರೆ, ಭಾಗವತರು ಕೂಡ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಕಥಾಕೀರ್ತನೆ ಉಳಿಸುವ ಮೂಲಕ ಮುಂದಿನ ಪೀಳಿಗೆಗೂ ಈ ಕಲೆ ಪರಿಚಯಿಸಬೇಕಿದೆ ಎಂದರು.

ಆಧುನಿಕ ಮಾಧ್ಯಮಗಳು ನೋಡುಗರಲ್ಲಿ ಅದರಲ್ಲೂ ವಿದ್ಯಾರ್ಥಿ, ಯುವಜನರಲ್ಲಿ ವಿಕೃತಿಗಳನ್ನು ಸೃಷ್ಠಿಸುತ್ತಿವೆ. ಮನುಷ್ಯನ ನಡವಳಿಕೆಗಳು ಸೌಮ್ಯವಾಗಿರಬೇಕು, ಆರೋಗ್ಯಕರ ದೃಷ್ಟಿಯಲ್ಲಿ ಸಮಾಜ ನಿರ್ಮಿಸಬೇಕು ಎಂದರು.

ಸಂಸ್ಕಾರದ ನಡೆಗೆ ಪ್ರೇರಣೆಯಾಗುವ ಕಥಾಕೀರ್ತನೆಗಳು ಒತ್ತಡದ ಜೀವನದಲ್ಲಿ ಮಾನಸಿಕ ನೆಮ್ಮದಿ ಮತ್ತು ಹೊಸ ಆಲೋಚನೆಗಳಿಗೆ ಕಾರಣವಾಗುತ್ತದೆ ಎಂದು ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

16ನೇ ಶತಮಾನದ ದಾಸ ಪರಂಪರೆಯೊಂದಿಗೆ ಸಶಕ್ತ ಮಾಧ್ಯಮವಾಗಿ ಹರಿಕಥೆ ಅಥವಾ ಕಥಾಕೀರ್ತನೆ ಬೆಳೆದುಕೊಂಡು ಬಂದಿದೆ. ಈ ಪರಂಪರೆಯಲ್ಲಿ ಬಹುದೊಡ್ಡ ವಿದ್ವಾಂಸದರ ಕೊಡುಗೆ ಇದೆ. ಮನುಷ್ಯನ ನಡವಳಿಕೆ, ಆಚಾರ, ವಿಚಾರಗಳನ್ನು ಪ್ರಭಾವಿಸಿ ಯೋಗ್ಯ ಮಾರ್ಗಕ್ಕೆ ಕರೆದೊಯ್ಯುವುದರ ಜತೆಗೆ ಜ್ಞಾನದ ವಿಕಾಸಕ್ಕೆ ಅನುಕೂಲವಾಗಿದೆ ಎಂದರು.

ಪಡುವಲಪಾಯ ಯಕ್ಷಗಾನ ವಿಶ್ವ ಪ್ರಸಿದ್ಧಿಯಾಗಲು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಶಿವರಾಮ ಕಾರಂತರ ಪರಿಶ್ರಮ ಹೆಚ್ಚಿದೆ, ಅದೇ ರೀತಿ ಕಥಾಕೀರ್ತನ ಪರಂಪರೆ ಮಹತ್ವದ ಸ್ಥಾನ ಪಡೆಯಬೇಕಾದರೆ ಯುವಕರಿಗೆ ಇದರ ಬಗ್ಗೆ ಅರಿವು ಮೂಡಬೇಕು ಎಂದರು.

ಕೀರ್ತನಕಾರ ರವಿಕುಮಾರ್‌ದಾಸ್ ಕಥಾಕೀರ್ತನ ಪರಂಪರೆ ಮತ್ತು ಮುಂದಿನ ಬೆಳೆವಣಿಗೆ ಕುರಿತು ಮಾತನಾಡಿದರುರು.

ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ ಅಧ್ಯಕ್ಷ ಲೋಕೇಶದಾಸ್, ಕಥಾಕೀರ್ತನಕಾರ ನರಸಿಂಹದಾಸ್, ಸಂಚಾಲಕ ಡಾ.ಲಕ್ಷ್ಮಣದಾಸ್, ಕಸಾಪ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ, ನಿವೃತ್ತ ಡಿಡಿಪಿಐ ಹುಚ್ಚಯ್ಯ, ಸಿರಿಗನ್ನಡ ಮಿತ್ರ ತಂಡದ ನಿರ್ದೇಶಕ ಬಿ.ಎಲ್.ಶ್ರೀನಿವಾಸ್, ಪ್ರಾಧ್ಯಾಪಕಿ ಡಾ.ಲೀಲಾ ಇತರರಿದ್ದರು.

ಹಿರಿಯರಿಗೆ ಗೌರವ ತೋರುವ, ಗುರುಗಳಿಗೆ ವಂದಿಸುವ ಕ್ರಮ ಸಂವಿಧಾನದಲ್ಲಿ ಇಲ್ಲ. ಆದರೆ ಭಾರತೀಯ ಪರಂಪರೆ ಅಂಥ ಮೌಲ್ಯಗಳನ್ನು ಪ್ರತಿ ಕಾಲ ಘಟ್ಟದಲ್ಲಿ ಮಕ್ಕಳಿಗೆ ತಿಳಿಸುತ್ತಾ ಅನೌಪಚಾರಿಕ ಶಿಕ್ಷಣಕ್ಕೆ ಮಹತ್ವ ನೀಡುತ್ತಿದೆ. ವೈ.ಎಸ್.ಸಿದ್ದೇಗೌಡ ಕುಲಪತಿ, ತುಮಕೂರು ವಿವಿ