ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರತಿ ತಿಂಗಳು ಸರಾಸರಿ ೨೫೦ ಯೂನಿಟ್ ರಕ್ತದ ಅವಶ್ಯಕತೆಯಿದೆ ಎಂದು ರಕ್ತನಿಧಿ ಕೇಂದ್ರದ ವೈಧ್ಯಾಧಿಕಾರಿ ಡಾ.ಕರುಂಬಯ್ಯ ಹೇಳಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಮಡಿಕೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಾಲ್ದಾರೆ, ಗ್ರಾಮ ಪಂಚಾಯಿತಿ ಮಾಲ್ದಾರೆ, ಯನ್ಸ್ ಸಂಸ್ಥೆ ಸಿದ್ದಾಪುರ, ಅಂಬೇಡ್ಕರ್ ಸೇನೆ ಕೊಡಗು, ಜನಪರ ಸಂಘಟನೆ ಮಾಲ್ದಾರೆ, ಯೂತ್ ಹುಂಡಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಾಲ್ದಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಒಬ್ಬರು ರಕ್ತದಾನ ಮಾಡಿದರೆ ಮೂರು ಜನರಿಗೆ ಉಪಯೋಗವಾಗುತ್ತದೆ. ಪುರುಷರು ಮೂರು ತಿಂಗಳಿಗೆ ಒಂದು ಬಾರಿ ಹಾಗೂ ಮಹಿಳೆಯರು ನಾಲ್ಕು ತಿಂಗಳಿಗೆ ಒಂದು ಬಾರಿ ರಕ್ತದಾನ ಮಾಡಬಹುದು. ಕೊಡಗು ಜಿಲ್ಲೆಯಲ್ಲಿ ಪ್ರತಿ ತಿಂಗಳು ಸರಾಸರಿ ೨೫೦ ಯೂನಿಟ್ ರಕ್ತದ ಅವಶ್ಯಕತೆಯಿದೆ. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆ ವತಿಯಿಂದ ಕೊಡಗು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಪ್ರತಿ ತಿಂಗಳು ಒಂದು ರಕ್ತದಾನ ಶಿಬಿರ ಏರ್ಪಡಿಸುತ್ತಿರುವ ಪರಿಣಾಮ ಕೊಡಗು ಜಿಲ್ಲೆಯ ರಕ್ತನಿಧಿ ಕೇಂದ್ರದಲ್ಲಿ ಅಗತ್ಯವಿರುವ ರಕ್ತ ಶೇಖರಣೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿದ್ದಾಪುರ ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಥೋಮಸ್, ಅಪಘಾತದ ಸಂದರ್ಭಗಳಲ್ಲಿ ಹೆಚ್ಚಾಗಿ ರಕ್ತದ ಅವಶ್ಯಕತೆ ಇರುತ್ತದೆ. ಅಗತ್ಯವಿರುವ ರಕ್ತವನ್ನು ರಕ್ತನಿಧಿ ಕೇಂದ್ರದಲ್ಲಿ ಶೇಖರಿಸಿಡು ಇಂತಹ ಶಿಬಿರವನ್ನು ಆಯೋಜಿಸಿರುವುದು ಸಂತಸ ತಂದಿದೆ ಎಂದು ಅಬಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಮುದಾಯ ಆಧಾರಿತ ಕಾರ್ಯಕ್ರಮದ ಹಿರಿಯ ವ್ಯವಸ್ಥಾಪಕ ವೆಂಕಟಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆ ಮನಗಂಡು ಸೂಕ್ತ ಸಮಯದಲ್ಲಿ ರಕ್ತದ ಕೊರತೆಯನ್ನು ನಿವಾರಿಸುವ ಹಾಗೂ ಗಿರಿಜನ ಮಹಿಳೆಯರಲ್ಲಿ ಕಂಡುಬರುವ ರಕ್ತ ಹೀನತೆ ಕಂಡುಬರುವ ಪರಿಣಾಮ ಜಿಲ್ಲಾವಾರು ಮತ್ತು ತಾಲೂಕುವಾರು ರಕ್ತದಾನ ಶಿಬಿರವನ್ನು ಆಯೋಜಿಸುತ್ತಿದೆ. ಈ ಶಿಬಿರದಲ್ಲಿ ರಕ್ತದಾನಿಗಳು ಹೆಚ್ಚಿನದಾಗಿ ಭಾಗವಹಿಸಿರುವುದು ಸಂತಸ ತಂದಿದೆ ಎಂದರು.
ಮಾಲ್ದಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಮಹಮ್ಮದ್ ಮೊಯಿನುದ್ದಿನ್ ಮಾತನಾಡಿ, ರಕ್ತಕ್ಕೆ ಪರ್ಯಾಯ ವ್ಯವಸ್ಥೆಯಿಲ್ಲ. ರಕ್ತ ಅತ್ಯಮೂಲ್ಯವಾಗಿದ್ದು, ನಾವು ದಾನ ಮಾಡುವುದರಿಂದ ಇನ್ನೊಬ್ಬರನ್ನು ಬದುಕಿಸುವ ಶಕ್ತಿ ರಕ್ತಕ್ಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ವಹಿಸಿದ್ದರು. ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಸತೀಶ್, ಜನಪರ ಸಂಘಟನೆಯ ಅಧ್ಯಕ್ಷ ಮಂಜು, ಚಿತ್ರಕಲಾವಿದ ಭಾವ, ಮಾಲ್ದಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ, ಲಯನ್ಸ್ ಸಂಸ್ಥೆಯ ಸದಸ್ಯರು, ಮಡಿಕೇರಿ ರಕ್ತನಿಧಿ ಕೇಂದ್ರದ ಸಿಬ್ಬಂದಿಗಳಿದ್ದರು.
ಕಾರ್ಯಕ್ರಮದಲ್ಲಿ ಒಟ್ಟು ೪೭ ರಕ್ತದಾನಿಗಳು ಭಾಗವಹಿಸಿದ್ದು, ೪೪ ಯೂನಿಟ್ ರಕ್ತ ಸಂಗ್ರಹಿಸುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿದರು.