ಮೈಸೂರು: ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಹೋರಾಟ ರೂಪಿಸಲು ಶೀಘ್ರದಲ್ಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೈದ್ರಾಬಾದ್ ಮಾದರಿ ಜಿಲ್ಲಾ ಮಟ್ಟದ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಚಿವ ಕೋಟೆ ಎಂ. ಶಿವಣ್ಣ ತಿಳಿಸಿದರು.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಭಾನುವಾರ ನಡೆದ ಸಮಾವೇಶದ ಪೂರ್ವಭಾವಿ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾದಿಗರ ಜನಸಂಖ್ಯೆ 35 ಲಕ್ಷ ಜನಸಂಖ್ಯೆ ಇದ್ದರೂ ಒಗ್ಗಟ್ಟಿನ ಕೊರತೆ ಎದುರಿಸುತ್ತಿದೆ. ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆ ಹಾಗೆಯೇ ಉಳಿದಿರುವುದರಿಂದ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಡಿಸೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ಹೈದ್ರಾಬಾದ್‌ನಲ್ಲಿ ನಡೆದ ಮಾದರಿಯಲ್ಲಿ ಮೈಸೂರಿನಲ್ಲೂ ಜಿಲ್ಲಾ ಮಟ್ಟದ ಸಮಾವೇಶ ನಡೆಸಲಾಗುತ್ತದೆ ಎಂದರು.
ಹೈದ್ರಾಬಾದಿನಲ್ಲಿ ಆಯೋಜಿಸಿದ್ದ ವಿಶ್ವರೂಪ ಮಹಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಒಳ ಮೀಸಲಾತಿ ನೀಡಲು ತಾವು ಬದ್ಧ ಎಂದು ಘೋಷಿಸಿದ ನಂತರ, ಮೂರು ದಶಕಗಳ ಒಳ ಮೀಸಲಾತಿ ಹೋರಾಟದಲ್ಲಿ ಗೆಲುವಿನ ಭರವಸೆಯ ಕಿರಣ ಮೂಡಿದೆ. ಆದರೆ, ಒಳಮೀಸಲಾತಿ ವಿರೋಧಿ ಶಕ್ತಿಗಳು ಈಗಾಗಲೇ ವ್ಯಾಪಕ ಪ್ರತಿರೊಧ ನಡೆ ತೋರಿಸುತ್ತಿದ್ದಾರೆ. ಹೀಗಾಗಿ ನಾವೆಲ್ಲರೂ ನಮ್ಮ ಸಮುದಾಯದ ಒಳಿತಿಗಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರವಾಣದಲ್ಲಿ ಒಗ್ಗೂಡುವುದು ಮತ್ತು ಮಾದಿಗರ ಮುನ್ನಡೆಯ ಕಾರ್ಯತಂತ್ರ ರೂಪಿಸುವುದು ಅವಶ್ಯಕವಾಗಿದೆ ಎಂದರು.
ಸುಪ್ರೀಂಕೋರ್ಟ್‌ನಲ್ಲಿ ಒಳಮೀಸಲಾತಿ ಕುರಿತು ಜ.17ಕ್ಕೆ ಏಳು ಜನರ ಸದಸ್ಯ ಪೀಠದ ಎದುರು ವಿಚಾರಣೆ ನಡೆಯುತ್ತಿರುವುದರ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕಂತೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ಮಾಡಿ ಮನವರಿಕೆ ಮಾಡಿಕೊಡುವುದು, ಕರ್ನಾಟಕದ ಮಟ್ಟಿಗೆ ಸರ್ಕಾರದ ನಡೆಯನ್ನು ಪ್ರಭಾವಿಸಲು ಮತ್ತು ವಿರೋಧಿ ಶಕ್ತಿಗಳ ಎದುರು ನಮ್ಮ ಶಕ್ತಿ ಪ್ರದರ್ಶಿಸಬೇಕಾದ ಕಾರಣ ಸಮಾವೇಶ ನಡೆಸಲಾಗುವುದು ಎಂದರು.
ಪಕ್ಷಭೇದ ಮರೆತು, ಪರಸ್ಪರ ಇರಬಹುದಾದ ವೈಮನಸ್ಸುಗಳನ್ನು ರಾಜಕೀಯ ಬದಿಗಿಟ್ಟು ನಾವೆಲ್ಲ ನಮ್ಮ ಸಮಾಜಕ್ಕಾಗಿ ಒಗ್ಗಟ್ಟಾಗಿ ಒಂದೆಡೆ ಸೇರಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಮಾಜಿ ಶಾಸಕ ಸಿ.ರಮೇಶ್, ವಕೀಲ ಎಂ.ಅರುಣ್‌ಕುಮಾರ್, ಮುಖಂಡರಾದ ಅರಕಲವಾಡಿ ನಾಗೇಂದ್ರ, ತಿ.ನರಸೀಪುರದ ದಾಸಯ್ಯ, ಬ್ಯಾಂಕ್ ಆನಂದಕುಮಾರ್ ಇತರರಿದ್ದರು.