ಜಿಲ್ಲೆ

ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ 26ರಂದು

ಹಿರೇಕೆರೂರ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೆ. 26ರಂದು ಹಾವೇರಿಯಲ್ಲಿ ರೈತ ಸಂಘದಿಂದ (ರಾಜ್ಯ ಕೆ.ಎಸ್.ಪುಟ್ಟಣ್ಣಯ್ಯ ಬಣ) ಬೃಹತ್ ಪ್ರತಿಭಟನೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಆಯೋಜಿಸಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ರೈತ ಸಂಘದಿಂದ ಗುರುವಾರ ಏರ್ಪಡಿಸಿದ್ದ ಪ್ರತಿಭಟನೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಬೆಳೆ ವಿಮೆಯಲ್ಲಿನ ತಾರತಮ್ಯ ಸರಿಪಡಿಸಿ ಹಣ ಬಿಡುಗಡೆ ಮಾಡಬೇಕು. ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಕೇಂದ್ರ ಸರ್ಕಾರ ಕುಲಾಂತರಿ ತಳಿಗಳನ್ನು ಬೆಳೆಯಲು ಅವಕಾಶ ನೀಡಬಾರದು. ಅಡಕೆ ಬೆಳೆ ವಿಮೆ ಕೂಡಲೇ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಾವೇರಿಯಲ್ಲಿ ಸೆ. 26ರಂದು ಬೆಳಗ್ಗೆ 11 ಗಂಟೆಗೆ ಕಾಗಿನೆಲ್ಲಿ ಕ್ರಾಸ್‌ನಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು. ಪ್ರತಿಭಟನೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ, ಮಹ್ಮದಗೌಸ್ ಪಾಟೀಲ, ಗಂಗನಗೌಡ ಮುದಿಗೌಡ್ರ, ಶಾಂತನಗೌಡ ಪಾಟೀಲ, ಶಂಕ್ರಗೌಡ ಮಕ್ಕಳ್ಳಿ, ಎಚ್.ಎಚ್. ಮುಲ್ಲಾ, ಶಿವಬಸಪ್ಪ ಗೋವಿ, ಈರಪ್ಪ ಮಳ್ಳೂರು, ಚನ್ನಬಸಪ್ಪ ಹಿತ್ತಲಮನಿ, ಮಲ್ಲೇಶಪ್ಪ ದೊಡ್ಡಉಪ್ಪಾರ, ಪುಟ್ಟಯ್ಯ ಮಳಲಿಮಠ ಹಾಗೂ ರೈತರು ಇದ್ದರು.