ಹುಬ್ಬಳ್ಳಿ: ನಗರದ ಕಿತ್ತೂರ ಚನ್ನಮ್ಮ ವೃತ್ತ ಹಾಗೂ ಹಳೇ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ಸೋಮವಾರ ಪರಿಶೀಲನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ, ನಡೆಯುತ್ತಿರುವ ಕಾಮಗಾರಿ, ಆಗಬೇಕಾಗಿರುವ ಬದಲಾವಣೆ, ಸದ್ಯದ ಸ್ಥಿತಿಗತಿ ಕುರಿತು ಸಮಗ್ರ ಮಾಹಿತಿ ಪಡೆದರು.
ನಂತರ ಸುದ್ದಿಗಾರರೊಂದಿಗೆ ಜಿಲ್ಲಾಧಿಕಾರಿ, ನಿಗದಿತ ಸಮಯದೊಳಗೆ ಕಿತ್ತೂರ ಚನ್ನಮ್ಮ ವೃತ್ತ ಹಾಗೂ ವಿಜಯಪುರ ರಸ್ತೆ ಮಾರ್ಗದ ಕಾಮಗಾರಿ ಮುಗಿಯಲಿದೆ. ಆಗ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು. ಉಳಿದರೆ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದೆ. ಬೇಸಿಗೆಯಲ್ಲಿ ಆಗಬೇಕಾಗಿರುವ ಕೆಲಸ ಮುಗಿದಿದೆ. ಮಳೆಗಾಲ ಬಂದರೂ ಉಳಿದ ಕಾಮಗಾರಿ ನಡೆಯಲಿದೆ. ಭೂಸ್ವಾಧೀನ ಪ್ರಕ್ರಿಯೆ ಅಡ್ಡಿಯಿಲ್ಲ. ಗುಣಮಟ್ಟ ತಪಾಸಣೆಗೆ ಪ್ರತ್ಯೇಕ ತಂಡ ರಚಿಸಲಾಗಿದೆ. ಗುಣಮಟ್ಟದಲ್ಲಿ ರಾಜಿ ಇಲ್ಲ ಎಂದರು.
ಡಿಸಿಪಿ ಸಿ.ಆರ್. ರವೀಶ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಸ್‌ಇ ಟಿ. ಪ್ರದೀಪ, ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಆರ್. ವಿಜಯಕುಮಾರ, ಇತರರು ಇದ್ದರು.