ಮಂಡ್ಯ: ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ದಿಢೀರ್ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಡಾ.ಕುಮಾರ, ಅಲ್ಲಿನ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದರು. ಮಾತ್ರವಲ್ಲದೆ ಮಿಮ್ಸ್ ಅಧಿಕಾರಿ, ಸಿಬ್ಬಂದಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಡಿಸಿ, ನೀವು ಮನುಷ್ಯರೋ ಅಥವಾ ಮೃಗಗಳಾ ಎಂದು ಕಟುವಾಗಿಯೇ ಬೆವರಿಳಿಸಿದರು.
ಮಿಮ್ಸ್‌ಗೆ ಭೇಟಿ ನೀಡಿದ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಅವ್ಯವಸ್ಥೆಯ ದರ್ಶನವಾಯಿತು. ಗಬ್ಬು ವಾಸನೆಯಿಂದ ಕೂಡಿದ್ದ ವಾರ್ಡ್‌ಗಳು, ಕೊಠಡಿಯೊಳಗೆ ಎಲ್ಲೆಂದರಲ್ಲಿ ಬಿದ್ದಿದ್ದ ಹಾಸಿಗೆ ಬೆಡ್‌ಶೀಟ್‌ಗಳು, ಶೌಚಗೃಹದಲ್ಲಿ ಕೈ ತೊಳೆಯುವುದಕ್ಕೂ ನೀರಿಲ್ಲ, ಮಹಿಳಾ ವಾರ್ಡ್‌ನಲ್ಲಿ ಶೌಚಗೃಹಕ್ಕೆ ಬಾಗಿಲೇ ಇರಲಿಲ್ಲ. ಇಂತಹ ಹಲವು ಹಲವು ಸಮಸ್ಯೆ ನೋಡಿ ಡಿಸಿ ಆಕ್ರೋಶಗೊಂಡರು.
ಈ ಹಿನ್ನೆಲೆಯಲ್ಲಿ ತರಾಟೆಗೆ ತೆಗೆದುಕೊಂಡು ಡಿಸಿ, ನಿಮ್ಮ ಮನೆಯಲ್ಲೂ ಹೀಗೆ ಇಟ್ಟುಕೊಳ್ಳುತ್ತಿರಾ?. ನಿಮ್ಮ ಮನೆಯ ಶೌಚಗೃಹ ಬಾಗಿಲು ಇಲ್ಲದಿದ್ದರೆ ಏನು ಆಗುತ್ತೆ?. ಮಹಿಳಾ ವಾರ್ಡ್‌ನಲ್ಲಿ ಶೌಚಗೃಹವಿಲ್ಲದಿದ್ದರೆ ಅಲ್ಲಿ ಇರುವವರ ಪರಿಸ್ಥಿತಿ ಏನು?. ಬರೋಬರಿ ಮೂರು ತಿಂಗಳಿನಿಂದ ಶೌಚಗೃಹಕ್ಕೆ ಬಾಗಿಲು ಇಲ್ಲ ಎಂದರೆ ಇಲ್ಲಿನ ಆಡಳಿತ ಯಾವ ಮಟ್ಟದಲ್ಲಿದೆ. ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಹಾಕಿದರೆ ರೋಗಿಗಳ ಆರೋಗ್ಯದ ಸ್ಥಿತಿ ಏನಾಗಬೇಕು. ನೀವೆಲ್ಲ ಮನುಷ್ಯರಾ, ಮೃಗಗಳಾ ಎಂದು ತೀವ್ರವಾಗಿ ಕ್ಲಾಸ್ ತೆಗೆದುಕೊಂಡರು.
ಈ ವೇಳೆ ಅಧಿಕಾರಿಗಳು ಸಮಸ್ಯೆಗೆ ಸಿಬ್ಬಂದಿ ಕಾರಣ ಎನ್ನುವಂತೆ ಮಾತನಾಡಲು ಮುಂದಾದಾಗ ಮತ್ತೆ ಆಕ್ರೋಶಗೊಂಡ ಜಿಲ್ಲಾಧಿಕಾರಿ, ಅವರಿಗೆ ಏನು ಹೇಳುತ್ತಿದ್ದೀರಾ?. ಅಧಿಕಾರಿಗಳು ಏಕೆ ವಾರ್ಡ್‌ಗೆ ರೌಂಡ್ಸ್ ಹೋಗುವುದಿಲ್ಲ. ವಾರ್ಡ್‌ಗೆ ಹೋದರೆ ಎಲ್ಲಿ ಯಾವ್ಯಾವ ಸಮಸ್ಯೆ ಇದೆ ಎನ್ನುವುದು ಗೊತ್ತಾಗುತ್ತದೆ ಅಲ್ವಾ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಮಿಮ್ಸ್ ಅಧಿಕಾರಿಗಳು ಉತ್ತರಿಸಲಾಗದೇ ಮೂಕ ಪ್ರೇಕ್ಷಕರಾದರು. ಅವ್ಯವಸ್ಥೆ ಪರಿಶೀಲನೆ ಬಳಿಕ ಅಧಿಕಾರಿಗಳೊಂದಿಗೆ ಸಭೆ ಮಾಡಿ ಅಲ್ಲಿಯೂ ತರಾಟೆಗೆ ತೆಗೆದುಕೊಂಡಿದ್ದಾರೆ.
ರೋಗಿಗಳಿಗೆ ಮೂಲ ಸೌಕರ್ಯ ಕೊಡಿ: ಪರಿಶೀಲನೆ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ, ಇನ್ನು ಮುಂದಾದರೂ ರೋಗಿಗಳಿಗೆ ಮೂಲ ಸೌಕರ್ಯ ಕಲ್ಪಿಸಿ. ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ರೋಗಿಗಳನ್ನು ಮಾನವೀಯ ದೃಷ್ಠಿಯಿಂದ ನೋಡಿಕೊಳ್ಳಬೇಕು. ಹೊರಗುತ್ತಿಗೆ ಆಧಾರದ ಮೇಲೆ ಸುಮಾರು 105 ಸ್ವಚ್ಛತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಆದರೆ ಆಸ್ಪತ್ರೆಯ ಸ್ವಚ್ಛತಾ ಕೆಲಸದ ಬಗ್ಗೆ ಅಧಿಕಾರಿಗಳು ಪ್ರತಿದಿನ ಮೇಲ್ವಿಚರಣೆ ನಡೆಸದೇ ಇದ್ದಲ್ಲಿ ಕೆಲಸಗಳು ಸುಸೂತ್ರವಾಗಿರುವುದಿಲ್ಲ. ಆಸ್ಪತ್ರೆಗೆ ಬರುವ ರೋಗಿಗಗಳು ತಮಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲವೆಂದು ದೂರು ಸಲ್ಲಿಸುತ್ತಾರೆ ಎಂದರು.
ಶೌಚಗೃಹದ ಬಾಗಿಲು ಮುರಿದು ಹೋಗಿರುವುದು, ಸ್ವಚ್ಛತೆ ಇಲ್ಲದಿರುವುದು, ಸ್ನಾನಗೃಹದಲ್ಲಿ ಬಕೆಟ್, ಚೆಂಬು ಇಲ್ಲದಿರುವುದು, ಕೈ ತೊಳೆಯುವ ಸಿಂಕ್‌ನಲ್ಲಿ ಮುರಿದು ಹೋಗಿರುವುದು ಕಂಡುಬಂದಿದೆ. ಇವುಗಳು ಸಣ್ಣ ಪುಟ್ಟ ಕೆಲಸಗಳಾಗಿರುತ್ತದೆ. ಅವುಗಳನ್ನು ಕಚೇರಿ ವೆಚ್ಚದಲ್ಲಿ ಸರಿಪಡಿಸಬಹುದು. ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ವ್ಹೀಲ್ಚೇರ್ ಮೂಲಕ ರೋಗಿಗಳನ್ನು ಕರೆದುಕೊಂಡು ಹೋಗಲು 20 ವಾರ್ಡ್ ಸಿಬ್ಬಂದಿಯಿದ್ದಾರೆ. ಕೆಲವು ಸಂದರ್ಭದಲ್ಲಿ ಹೆಚ್ಚಿನ ರೋಗಿಗಳು ಬಂದಾಗ ಒಟ್ಟಿಗೆ ಕರೆದೊಯ್ಯುವ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಆದಾಗ್ಯೂ ರೋಗಿಗಳೊಂದಿಗೆ ಸಹನೆಯಿಂದ ವರ್ತಿಸಿ ಕೆಲಸ ನಿರ್ವಹಿಸಲು ತಿಳಿಸಿ ಎಂದು ಸೂಚನೆ ನೀಡಿದರು.
ಕಳೆದ ಜೂನ್ ಮಾಹೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು ಸಭೆ ನಡೆಸಿದಾಗ 3 ತಿಂಗಳೊಳಗೆ ಕ್ಯಾನ್ಸರ್ ಆಸ್ಪತ್ರೆ ಕೆಲಸ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು. ಆದರೆ ಇನ್ನೂ ಪೂರ್ಣಗೊಂಡಿರುವುದಿಲ್ಲ. ಫೆಬ್ರವರಿ ಅಂತ್ಯದೊಳಗೆ ಸಿವಿಲ್ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಡಿಸಿ ಸೂಚನೆ ನೀಡಿದರು. ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಮಾತನಾಡಿ, ಸಿವಿಲ್ ಕಾಮಗಾರಿ ಪೂರ್ಣಗೊಂಡ ನಂತರ ಎಫ್.ಡಿ ಅವರು ಸಿಬ್ಬಂದಿ ನೇಮಕಾತಿಗೆ ಅನುಮತಿ ನೀಡುತ್ತಾರೆ. ಬಂಕರ್ ಅಳವಡಿಕೆ ಮಾಡಲು ಸುಮಾರು 3 ತಿಂಗಳು ಬೇಕಾಗುತ್ತದೆ. ಮಿಮ್ಸ್‌ನಲ್ಲಿ 10 ಸರ್ಜನ್ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಸುಮಾರು ಸರಾಸರಿ 36 ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದು ವಿವರಿಸಿದರು.
ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಆರ್‌ಎಂಒ ಡಾ.ದರ್ಶನ್‌ಕುಮಾರ್, ಸಿಎಒ ಜಾನ್ಸನ್, ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಪ್ರಸಾದ್ ಇತರರಿದ್ದರು.